ಸಂಚಾರಿ ನಿಯಮ ಉಲ್ಲಂಘನೆ- 1.41 ಲಕ್ಷ ದಂಡ ಕಟ್ಟಿದ ಲಾರಿ ಚಾಲಕ

ಜೈಪುರ್: ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ವಾಹನ ಸವಾರರು ದುಬಾರಿ ದಂಡ ಕಟ್ಟಲು ಪರದಾಡುತ್ತಿದ್ದು, ರಾಜಸ್ಥಾನದ ಲಾರಿ ಚಾಲಕನೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿ ಬರೋಬ್ಬರಿ 1.41 ಲಕ್ಷ ರೂ. ದಂಡ ಕಟ್ಟಿದ್ದಾನೆ.

ಹೌದು. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಭಾರೀ ಮೊತ್ತದ ದಂಡವನ್ನು ಹಾಕಲಾಗುತ್ತದೆ. ಈ ಹಿಂದೆ ಒಡಿಶಾದಲ್ಲಿ ಲಾರಿ ಚಾಲಕರೊಬ್ಬರಿಗೆ 86,000 ರೂ. ದಂಡ ಹಾಕಿದ್ದು ದೇಶದಲ್ಲಿಯೇ ದುಬಾರಿ ದಂಡ ಎನ್ನಲಾಗಿತ್ತು. ಆದರೆ ಈಗ ರಾಜಸ್ಥಾನದಲ್ಲಿ ಲಾರಿ ಚಾಲಕನೊಬ್ಬ ಸಂಚಾರ ನಿಯಮ ಉಲ್ಲಂಘನೆ ಮಾಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಬರೋಬ್ಬರಿ 1,41,700 ರೂ. ದಂಡ ಕಟ್ಟಿದ್ದಾನೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಬಂದ ಬಳಿಕ ಇದು ದೇಶದಲ್ಲಿಯೇ ದುಬಾರಿ ಮೊತ್ತದ ದಂಡ ಎಂದು ಹೇಳಲಾಗಿದೆ. ಇದನ್ನೂ ಓದಿ:ಸ್ಲಿಪ್ಪರ್ ಹಾಕಿ ಬೈಕ್ ಓಡಿಸಿದ್ರೆ ಬೀಳುತ್ತೆ ಭಾರೀ ದಂಡ!

ಈ ಲಾರಿ ಚಾಲಕ ಓವರ್ ಲೋಡ್ ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ಸಂಚಾರಿ ಪೊಲೀಸರು 1,41,700 ರೂ. ದಂಡ ಹಾಕಿದ್ದಾರೆ. ಆತ ಕೋರ್ಟಿಗೆ ಹಾಜರಾಗಿ ಈ ದಂಡವನ್ನು ಕಟ್ಟಿದ್ದಾನೆ ಎಂದು ಮೂಲಗಳು ತಿಳಿಸಿದೆ.

ಇತ್ತೀಚೆಗೆ ಉತ್ತರ ಪ್ರದೇಶದ ಆಲಿಘರ್‍ನಲ್ಲಿ ಟ್ರಾಫಿಕ್ ಪೊಲೀಸರು ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು, ಆ ಚಾಲಕ ಹೆಲ್ಮೆಟ್ ಹಾಕಿಕೊಂಡೇ ಕಾರು ಚಲಾಯಿಸುತ್ತಿರುವ ಪ್ರಕರಣ ಕೂಡ ಸಖತ್ ಸುದ್ದಿಯಾಗಿತ್ತು. ಆಲಿಘರ್‍ನ ಪಿಯುಷ್ ವಶ್ರ್ನಿ ಅವರು ಕಾರಿನಲ್ಲಿ ಹೆಲ್ಮೆಟ್ ಹಾಕದಿದ್ದಕ್ಕೆ ದಂಡ ಕಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಗಸ್ಟ್ 27ರಂದು ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ನನಗೆ 500 ರೂ. ದಂಡ ವಿಧಿಸಿ, ಇ-ಚಲನ್ ನೀಡಿದ್ದರು. ಇ-ಚಲನ್‍ನಲ್ಲಿ ನನ್ನ ಕಾರಿನ ಸಂಖ್ಯೆ ಇತ್ತು. ಆದ್ದರಿಂದ ಮತ್ತೆ ದಂಡ ಹಾಕಬಹುದೆಂಬ ಭಯದಿಂದ ನಾನು ಹೆಲ್ಮೆಟ್ ಹಾಕಿಕೊಂಡೇ ಕಾರು ಒಡಿಸುತ್ತಿದ್ದೇನೆ ಎಂದು ಹೇಳಿದ್ದರು.  ಇದನ್ನೂ ಓದಿ:ಸಂಚಾರ ನಿಯಮ ಉಲ್ಲಂಘಿಸಿ 86,500 ರೂ. ದಂಡ ತೆತ್ತ ಲಾರಿ ಚಾಲಕ

ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ಸಂಚಾರಿ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಇ-ಚಲನ್ ಮೇಲೆ ತನ್ನ ಕಾರಿನ ಸಂಖ್ಯೆ ಇದೆ ಎಂದು ಪಿಯೂಷ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಚಾರಿ ಪೊಲೀಸರಿಂದ ಎಡವಟ್ಟಾಗಿದ್ದು, ಚಲನ್ ಪರಿಶೀಲನೆ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದರು.

Comments

Leave a Reply

Your email address will not be published. Required fields are marked *