ಹೆಲಿಕಾಪ್ಟರ್ ಜರ್ನಿ – ನಿವೃತ್ತಿ ದಿನ ಪತ್ನಿಯ ಆಸೆ ಈಡೇರಿಸಿದ ಶಿಕ್ಷಕ

ಜೈಪುರ: ರಾಜಸ್ಥಾನದ ಶಿಕ್ಷಕರೊಬ್ಬರು ತಮ್ಮ ನಿವೃತ್ತಿಯ ದಿನ ಪತ್ನಿಯ ಆಸೆಯನ್ನು ಈಡೇರಿಸಿದ್ದಾರೆ. ಒಂದು ದಿನ ಪತ್ನಿ ಹೆಲಿಕಾಪ್ಟರ್ ಬಾಡಿಗೆಗೆ ಎಷ್ಟಾಗುತ್ತೆ ಎಂದು ಕೇಳಿದ್ದರು. ಒಮ್ಮೆ ಹೆಲಿಕಾಪ್ಟರ್ ನಲ್ಲಿ ಕುಳಿತಕೊಳ್ಳಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದೀಗ ಶಿಕ್ಷಕ ತಮ್ಮ ನಿವೃತ್ತಿಯ ಹಣದಿಂದ ಪತ್ನಿಯ ಆಸೆಯನ್ನು ಪೂರ್ಣ ಮಾಡಿದ್ದಾರೆ.

ರಮೇಶ್ ಚಾಂದ್ ಮೀನಾ ಪತ್ನಿಗಾಗಿ ಹೆಲಿಕಾಪ್ಟರ್ ಬುಕ್ ಮಾಡಿರುವ ಶಿಕ್ಷಕ. ಕಾಪರ್ ನಲ್ಲಿ ಸಾಂಪ್ರದಾಯಿಕ ಉಡುಗೆ, ಸನ್ ಗ್ಲಾಸ್ ತೊಟ್ಟ ಪತ್ನಿ ಮತ್ತು ಮೊಮ್ಮಗನೊಂದಿಗೆ ತಮ್ಮ ಮೊದಲು ವಾಯುಯಾನ ಮಾಡಿದ್ದಾರೆ. ತಮ್ಮ ಶಾಲೆಯ ಬಳಿಯಿಂದ ಸ್ವಗ್ರಾಮ ಮಲವಾಲಿಗೆ ಪ್ರಯಾಣಿಸಿದ್ದಾರೆ.

ರಮೇಶ್ ಮೀನಾ ಪತ್ನಿಯ ಖುಷಿಗಾಗಿ ನವದೆಹಲಿಯ ಕಾಪರ್ ಸರ್ವಿಸ್ ನಲ್ಲಿ 3.70 ಲಕ್ಷ ರೂ. ನೀಡಿ ಹೆಲಿಕಾಪ್ಟರ್ ಬುಕ್ ಮಾಡಿದ್ದರು. 18 ನಿಮಿಷದ ನಮ್ಮ ಪ್ರಯಾಣ ಅದ್ಭುತವಾದ ಅನುಭವವನ್ನು ನೀಡಿದೆ ಎಂದು ರಮೇಶ್ ಮೀನಾ ಹೇಳುತ್ತಾರೆ.

ಒಂದು ದಿನ ಮನೆಯ ಮೇಲೆ ಕುಳಿತಾಗ ಪತ್ನಿ ಹೆಲಿಕಾಪ್ಟರ್ ನೋಡಿ, ಇದರ ಪ್ರಯಾಣಕ್ಕೆ ಎಷ್ಟು ಹಣ ಬೇಕು. ಬಾಡಿಗೆ ಪಡೆಯಲು ತುಂಬಾ ಹಣ ಬೇಕಲ್ವಾ ಎಂದು ಪ್ರಶ್ನೆ ಮಾಡಿದ್ದಳು. ಅಂದೇ ನಿವೃತ್ತಿಯ ದಿನದಂದು ಪತ್ನಿಯ ಆಸೆಯನ್ನು ಪೂರ್ಣ ಮಾಡಬೇಕೆಂದು ನಿರ್ಧರಿಸಿದ್ದೆ. ಇದು ನಮ್ಮ ಮೊದಲ ವಾಯು ಪಯಣವಾಗಿದ್ದು, ಖುಷಿಯಾಗಿತ್ತು ಎಂದು ರಮೇಶ್ ಮೀನಾ ಸಂತೋಷ ಹಂಚಿಕೊಂಡಿದ್ದಾರೆ.

ಸ್ವಗ್ರಾಮದಲ್ಲಿ ಕಾಪರ್ ಇಳಿಸಲು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲಾಗಿತ್ತು. ಅನುಮತಿ ನೀಡಿದ ಜಿಲ್ಲಾಡಳಿತಕ್ಕೆ ತಮ್ಮ ಧನ್ಯವಾದಗಳನ್ನು ರಮೇಶ್ ಮೀನಾ ತಿಳಿಸಿದರು.

Comments

Leave a Reply

Your email address will not be published. Required fields are marked *