7 ಪುತ್ರರಿರೋ ದಂಪತಿಗೆ ಅನಾಥ ಹೆಣ್ಣುಮಗುವನ್ನ ಇಟ್ಕೊಳ್ಳೊ ಆಸೆ- ಆದ್ರೆ ಸರ್ಕಾರ ಬಿಡ್ತಿಲ್ಲ

ಜೈಪುರ: 7 ಗಂಡು ಮಕ್ಕಳನ್ನ ಹೊಂದಿರೋ ರಾಜಸ್ಥಾನದ ದಂಪತಿ ತಮಗೆ ಸಿಕ್ಕ ಅನಾಥ ಹೆಣ್ಣುಮಗುವನ್ನ ಸಾಕಲು ಬಯಸಿದ್ದು ಇದಕ್ಕೆ ಇಲ್ಲಿನ ಸರ್ಕಾರ ಅಡ್ಡಿಪಡಿಸಿದೆ.

ತುಂಬಾ ವರ್ಷಗಳಿಂದ ಒಂದು ಹೆಣ್ಣು ಮಗುವಿಗಾಗಿ ಹಂಬಲಿಸಿದ್ದ ಧೋಲ್‍ಪುರ್‍ನ ರೈತ ಲೀಲಾಧರ್ ಕುಶ್ವಾಹಾ ಹಾಗೂ ಪತ್ನಿ ಸುಖ್‍ದೇವಿಗೆ ಕಳೆದ ವಾರ ಅನಾಥ ಹೆಣ್ಣುಮಗುವೊಂದು ಸಿಕ್ಕಿತ್ತು. ತಮ್ಮ ಪ್ರಾರ್ಥನೆಗೆ ಫಲ ಸಿಕ್ಕಿತು ಎಂದು ದಂಪತಿ ಅಂದುಕೊಂಡಿದ್ರು. ಆದ್ರೆ ಅವರ ಸಂತೋಷ ಬಹಳ ಕಾಲ ಉಳಿಯಲಿಲ್ಲ. ದಂಪತಿ ಮಗುವನ್ನ ಇಟ್ಟುಕೊಳ್ಳುವಂತಿಲ್ಲ ಎಂದು ಸರ್ಕಾರ ಹೇಳಿದ್ದು, ಮಗುವನ್ನು ಹಿಂದಿರುಗಿಸದಿದ್ರೆ ಕಾನೂನು ಕ್ರಮ ಕೈಗೊಳ್ಳೊದಾಗಿ ಎಚ್ಚರಿಕೆ ನೀಡಿದೆ.

ದತ್ತು ಪಡೆಯಲು ಕಾನೂನು ಪ್ರಕ್ರಿಯೆ ಇದೆ. ಅನಾಥ ಮಕ್ಕಳನ್ನ ಯಾರೂ ಕೂಡ ಹಾಗೇ ಇಟ್ಟುಕೊಳ್ಳುವಂತಿಲ್ಲ ಎಂದು ಧೋಲ್‍ಪುರ್‍ನ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಡಾ ನರೇಶ್ ಶರ್ಮಾ ಹೇಳಿದ್ದಾರೆ. ಮಂಗಳವಾರದೊಳಗಾಗಿ ಮಗುವನ್ನ ತಮಗೆ ಒಪ್ಪಿಸಬೇಕೆಂದು ಧೋಲ್‍ಪುರ್ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿಜೇಂದ್ರ ಪಾರ್ಮರ್ ಪೊಲೀಸರಿಗೆ ಸೂಚಿಸಿದ್ದಾರೆ.

ತಮ್ಮ ಮಗಳಂತೆ ಭಾವಿಸಿದ್ದ ಮಗುವನ್ನ ಬಲವಂತವಾಗಿ ಪೊಲೀಸರು ತಮ್ಮಿಂದ ಬೇರ್ಪಡಿಸುತ್ತಿರುವುದಕ್ಕೆ ಈಗ ದಂಪತಿ ಕಂಗಾಲಾಗಿದ್ದಾರೆ. ದಂಪತಿಗೆ ಈ ಮಗು ಅವರ ತೋಟದ ಬಳಿ ಸಿಕ್ಕಿತ್ತು. ದಂಪತಿಗೆ ಕಿರಿಯ ಮಗ ಹುಟ್ಟಿದ ಎರಡು ದಿನಗಳ ನಂತರವಷ್ಟೇ ಹೆಣ್ಣುಮಗುವನ್ನ ಮನೆಗೆ ತಂದಿದ್ದರು. ಅಂದಿನಿಂದ ಸುಖ್ ದೇವಿ ಎರಡೂ ಮಕ್ಕಳಿಗೆ ಎದೆಹಾಲು ನೀಡುತ್ತಿದ್ದರು.

ಇದು ಸರಿಯಲ್ಲ. ದೇವಿ ದುರ್ಗಾ ನಮ್ಮ ಪ್ರಾರ್ಥನೆ ಈಡೇರಿಸಿದದ್ದಾಳೆ. ಮಗುವನ್ನ ಕಳಿಸುವ ಪ್ರಶ್ನೆಯೇ ಇಲ್ಲ ಎಂದು ಸುಖ್ ದೇವಿ ಹೇಳಿದ್ದಾರೆ. ರೈತ ಕುಶ್ವಾಹಾ 1.6 ಎಕರೆ ಭೂಮಿ ಹೊಂದಿದ್ದು ಅನುಕೂಲಸ್ತರಾಗಿದ್ದಾರೆ. ಮಗುವನ್ನ ಅವರಿಂದ ತೆಗೆದುಕೊಳ್ಳಲು ಹೊರಟಿರುವ ಸರ್ಕಾರದ ಅದೇಶವನ್ನ ಎದುರಿಸಲು ಕಾನೂನು ಸಲಹೆ ಪಡೆಯುತ್ತಿದ್ದಾರೆ.

ಸದ್ಯಕ್ಕೆ ಸ್ಥಳೀಯ ಅಧಿಕಾರಿಗಳು ಕುಶ್ವಾಹಾ ಹಾಗೂ ಪತ್ನಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಅವರು ಮಗುವನ್ನ ಹಿಂದಿರುಗಿಸಲೇಬೇಕು. ಮಗು ಬೇಕಾದ್ರೆ ದತ್ತು ಪಡೆಯುವ ಪ್ರಕ್ರಿಯೆ ಮಾಡಬೇಕಾಗಿದೆ. ಆದ್ರೆ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಕುಶ್ವಾಹಾ ಹಾಗೂ ಅವರ ಪತ್ನಿ ಮಗುವನ್ನ ದತ್ತು ಪಡೆಯಲು ಅರ್ಜಿ ಹಾಕಿದ್ರೂ ಆ ಮಗು ಅವರಿಗೆ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಯಾಕಂದ್ರೆ ಬೇರೆ ಅರ್ಜಿದಾರರೂ ಇರುತ್ತಾರೆ. ಇವರಿಗಿಂತ ಅರ್ಹರಾದವರನ್ನು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ ಶರ್ಮಾ ಅವರ ಪ್ರಕಾರ, ಮಗುವೊಂದು ಪತ್ತೆಯಾದ 2 ತಿಂಗಳ ಬಳಿಕವಷ್ಟೇ ದತ್ತು ಪ್ರಕ್ರಿಯೆಗೆ ಅರ್ಹವಾಗುತ್ತದೆ. ಪೊಲೀಸರು ಮಗುವಿನ ನಿಜವಾದ ತಂದೆ ತಾಯಿಯನ್ನು ಹುಡುಕಲು ಈ ಎರಡು ತಿಂಗಳಲ್ಲಿ ಪ್ರಯತ್ನಿಸುತ್ತಾರೆ. ನವಜಾತ ಶಿಶುವಿಗೆ ಅನಾರೋಗ್ಯವಿದ್ದರೆ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆಲ್ಲಾ ಎರಡು ತಿಂಗಳು ಬೇಕಾಗುತ್ತದೆ. ಅದಾದ ನಂತರ ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿಗೆ ಮಾಹಿತಿ ನೀಡಿದ ಬಳಿಕವಷ್ಟೇ ಮಗು ದತ್ತು ಪಡೆಯಲು ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿ ಕಾನೂನು ಪ್ರಕ್ರಿಯೆಯ ನಂಬಿಕೆಯ ಜೊತೆಗೆ ಕುಶ್ವಾಹಾ ದಂಪತಿ ದೇವರನ್ನ ಪ್ರಾರ್ಥಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *