ಭಾರತ ಬಂದ್ ಕರೆಗೆ ಮೊದಲ ಜಯ-ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ರಾಜಸ್ಥಾನ

-ಕರ್ನಾಟಕದಲ್ಲಿಯೂ ಪೆಟ್ರೋಲ್, ಡೀಸೆಲ್ ದರ ಕಡಿಮೆ ಆಗುತ್ತಾ..?

ಜೈಪುರ: ಇಂದು ಕಾಂಗ್ರೆಸ್ ದೇಶವ್ಯಾಪಿ ಭಾರತ್ ಬಂದ್ ಗೆ ಕರೆ ನೀಡಿದೆ. ಈ ನಡುವೆ ಭಾನುವಾರ ರಾಜಸ್ಥಾನದ ಸಿಎಂ ವಸುಂಧರಾ ರಾಜೇ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಭಾನುವಾರ ಹುನುಮಘಢ ಜಿಲ್ಲೆಯಲ್ಲಿ ನಡೆದ `ರಾಜಸ್ಥಾನ ಗೌರವ ಯಾತ್ರೆ’ಯಲ್ಲಿ ಸಿಎಂ ವಸುಂಧರಾ ರಾಜೆ ಭಾಗಿಯಾಗಿದ್ದರು. ಸಮಾವೇಶದಲ್ಲಿ ಮಾತನಾಡುತ್ತಾ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲಿನ ಶೇ.4 ರಷ್ಟು ವ್ಯಾಟ್ ಕಡಿತಗೊಳಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಶೇ.30 ರಷ್ಟಿದ್ದ ವ್ಯಾಟ್ ಶೇ.26ಕ್ಕೆ ಬರಲಿದೆ. ಇತ್ತ ಡೀಸೆಲ್ ಶೇ.22ರಿಂದ ಶೇ.18ಕ್ಕೆ ಬದಲಾಗಲಿದೆ ಎಂದು ತಿಳಿಸಿದರು.

ವ್ಯಾಟ್ ಇಳಿಕೆಯಿಂದಾಗಿ ಪೆಟ್ರೋಲ್ ಮತ್ತು ಡಿಸೇಲ್ ಒಂದು ಲೀಟರ್ ಮೇಲೆ 2.5ರೂ ಕಡಿಮೆ ಆಗಲಿದೆ. ಶೇ.4 ರಷ್ಟು ವ್ಯಾಟ್ ಕಡಿತಗೊಳಿಸುವುದರಿಂದ ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದೆ. ವ್ಯಾಟ್ ಕಡಿತದಿಂದಾಗಿ ಸರ್ಕಾರಕ್ಕೆ 2000 ಕೋಟಿ ರೂ. ಆರ್ಥಿಕ ಹೊರೆ ಆಗಲಿದೆ. ರಾಜ್ಯ, ರೈತರು, ಮಹಿಳೆಯರು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ ಎಂದು ಸಿಎಂ ತಿಳಿಸಿದ್ದಾರೆ.

ಈ ವರ್ಷದ ಅಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ವಸುಂಧರಾ ರಾಜೆ, ಕಾಂಗ್ರೆಸ್ ನಿಂದ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ರೇಸ್‍ನಲ್ಲಿದ್ದಾರೆ.

ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಡಳಿತ ವೈಖರಿ ಖಂಡಿಸಿ ಕಾಂಗ್ರೆಸ್ ಭಾರತ್ ಬಂದ್ ಗೆ ಕರೆ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸರ್ಕಾರ ವಿಧಿಸಿರೋ ಸೆಸ್ ಸ್ವಲ್ಪಮಟ್ಟಿಗೆ ಇಳಿಕೆ ಮಾಡಿದ್ರೆ ರಾಜ್ಯದ ಜನತೆಗೆ ಹೊರೆ ತಗ್ಗಬಹುದು. ರಾಜ್ಯದಲ್ಲಿ ತೈಲ ಉತ್ಪನ್ನಗಳ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಕರ್ನಾಟಕದಲ್ಲಿ ಹೇಗಿದೆ ಪೆಟ್ರೋಲ್ ತೆರಿಗೆ..?
* ಮೂಲದರ- 58.55 ರೂ. (ಲೀ.ಗೆ) (ಕೇಂದ್ರ ತೆರಿಗೆ, ಸಾರಿಗೆ ವೆಚ್ಚ ಸೇರಿ)
* ಕರ್ನಾಟಕದಲ್ಲಿ ತೆರಿಗೆ- 22.21 ರೂ (ಲೀ.ಗೆ)
* ಶೇ.32ರಷ್ಟು ಸೆಸ್ ಅಂದರೆ 18.74 ರೂಪಾಯಿ ಆಗುತ್ತೆ
* ಎಲ್‍ಎಫ್‍ಆರ್ – 47 ಪೈಸೆ (ಲೈಸನ್ಸ್ ಫೀ ರಿಕವರಿ – ಬಂಕ್ ನಿರ್ವಹಣೆ, ಸ್ಟೋರೇಜ್‍ಗೆ ವಿಧಿಸೋ ಮೊತ್ತ)
* ಡೀಲರ್‍ಗಳಿಗೆ ಕಮಿಷನ್- 3.00 ರೂ.
* ತೆರಿಗೆ ನಂತರ- 80.76 ರೂ.

ಕರ್ನಾಟಕದಲ್ಲಿ ಹೇಗಿದೆ ಡೀಸೆಲ್ ತೆರಿಗೆ..?
* ಮೂಲದರ – 57.59 ರೂ. (ಲೀ.ಗೆ) (ಕೇಂದ್ರ ತೆರಿಗೆ, ಸಾರಿಗೆ ವೆಚ್ಚ ಸೇರಿ)
* ಕರ್ನಾಟಕದಲ್ಲಿ ತೆರಿಗೆ- 14.39 ರೂ. (ಲೀ.ಗೆ)
* ಶೇ.21ರಷ್ಟು ಸೆಸ್ ಅಂದರೆ 12 ರೂಪಾಯಿ ಆಗುತ್ತೆ
* ಎಲ್‍ಎಫ್‍ಆರ್ – 37 ಪೈಸೆ (ಲೈಸನ್ಸ್ ಫೀ ರಿಕವರಿ – ಬಂಕ್ ನಿರ್ವಹಣೆ, ಸ್ಟೋರೇಜ್‍ಗೆ ವಿಧಿಸೋ ಮೊತ್ತ)
* ಡೀಲರ್‍ಗಳಿಗೆ ಕಮಿಷನ್- 2.00 ರೂ (ಲೀ.ಗೆ)
* ತೆರಿಗೆ ನಂತರ- 71.98 ರೂ. (ಲೀ.ಗೆ)

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *