ಹಸು ಸಗಣಿ ಕೆಜಿಗೆ 2 ರೂ., ರಾಜ್ಯದ ಪ್ರತಿ ಮಗುವಿಗೂ ಇಂಗ್ಲಿಷ್‌ ಶಿಕ್ಷಣ – ರಾಜಸ್ಥಾನಕ್ಕೆ ಕಾಂಗ್ರೆಸ್‌ ಗ್ಯಾರಂಟಿ

ಜೈಪುರ: ರಾಜ್ಯ ವಿಧಾನಸಭೆ ಚುನಾವಣೆ (Rajasthan Assembly Elections) ಹಿನ್ನೆಲೆ ಮತದಾರರನ್ನು ಸೆಳೆಯಲು ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆ (Manifesto) ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ರಾಜಸ್ಥಾನದ ಜನರಿಗೆ 7 ಗ್ಯಾರಂಟಿ (Guarantee) ಘೋಷಿಸಿದ್ದು ಜೊತೆಗೆ ಜಾತಿ ಸಮೀಕ್ಷೆ ನಡೆಸಿ ಬಿಡುಗಡೆ ಮಾಡುವ ಭರವಸೆ ನೀಡಲಾಗಿದೆ.

ಕರ್ನಾಟಕದ ಮಾದರಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ವಾರ್ಷಿಕ 10,000 ರೂ. ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಗೊಧನ್ ಯೋಜನೆಯಡಿ ಸರ್ಕಾರವು ಹಸುವಿನ ಸಗಣಿ ಪ್ರತಿ ಕೆಜಿಗೆ 2 ರೂ.ಯಲ್ಲಿ ಖರೀದಿ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್/ಟ್ಯಾಬ್ಲೆಟ್ ವಿತರಿಸಲಾಗುವುದು ಎಂದು ಹೇಳಿದೆ.

ಚಿರಂಜೀವಿ ವಿಪತ್ತು ಪರಿಹಾರ ವಿಮೆ ಯೋಜನೆಯಡಿ ಪ್ರತಿಯೊಬ್ಬರಿಗೂ 15 ಲಕ್ಷ ರೂ. ವಿಮೆ ನೀಡಲಾಗುವುದು, 500 ರೂ.ಯಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ, ರಾಜ್ಯದ ಪ್ರತಿಯೊಂದು ಮಗುವಿಗೂ ಇಂಗ್ಲಿಷ್ ಶಿಕ್ಷಣ ನೀಡಲಾಗುವುದು, ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಭರವಸೆ ಕಾಂಗ್ರೆಸ್ ನೀಡಿದೆ. ಈ ಗ್ಯಾರಂಟಿ ಹೊರತಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ನಡೆಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪಂಚಾಯತ್ ಮಟ್ಟದಲ್ಲಿ ನೇಮಕಾತಿ ಮತ್ತು ಇತರ ಕಲ್ಯಾಣ ಯೋಜನೆಗಳಿಗೆ ಹೊಸ ಯೋಜನೆ ಭರವಸೆ ನೀಡಿತು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್, ನಾವು ಜನರಿಂದ ಸಲಹೆಗಳನ್ನು ಪಡೆದು ಪ್ರಣಾಳಿಕೆ ರಚಿಸಿದ್ದೇವೆ. ಕಳೆದ ಬಾರಿ ನೀಡಿದ ಭರವಸೆಯಲ್ಲಿ 96% ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು. ಉತ್ತರ ಭಾರತದ ರಾಜ್ಯಗಳಲ್ಲಿ ಆರ್ಥಿಕ ಅಭಿವೃದ್ಧಿ ದರದಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನದ ಆರ್ಥಿಕತೆಯು ವರ್ಷಾಂತ್ಯದ ವೇಳೆಗೆ 15 ಲಕ್ಷ ರೂ. ಆಗಲಿದೆ. 2030ರ ವೇಳೆಗೆ 30 ಲಕ್ಷ ಕೋಟಿ ರೂ. ಇರಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್‌ಗೆ ಆಹ್ವಾನ – ಆಹ್ವಾನಿಸಿದ್ದಕ್ಕೆ ಸ್ಪಷ್ಟನೆ ಕೊಟ್ಟ ಕೈ ಶಾಸಕ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರು ನಮ್ಮನ್ನು ನಿಂದಿಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ರಾಹುಲ್ ಅವರನ್ನು ನಿಂದಿಸುತ್ತಿದ್ದರು, ನನ್ನನ್ನು ನಿಂದಿಸುತ್ತಿದ್ದರು. ಈಗ ಅಶೋಕ್ ಗೆಹ್ಲೋಟ್ ಅವರನ್ನೂ ನಿಂದಿಸಲು ಆರಂಭಿಸಿದ್ದಾರೆ. ನಾನು ಅವರ ತಂದೆಯನ್ನು ನಿಂದಿಸಿದ್ದೇನೆ ಎಂದು ಅವರು ಹೇಳುತ್ತಾರೆ. ನಾನೇಕೆ ಹಾಗೆ ಮಾಡಲಿ ಎಂದು ಪ್ರಶ್ನಿಸಿದರು.

ಬಿಜೆಪಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದೆ. ಆದರೆ ನೀವು ಏನೇ ಮಾಡಿದರೂ ರಾಜಸ್ಥಾನದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಯಾವುದೇ ಷರತ್ತಿನಲ್ಲಿಯೂ ರಾಜಸ್ಥಾನದಲ್ಲಿ ಜಾತಿ ಗಣತಿ ನಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇದನ್ನೂ ಓದಿ: ಮೋದಿ ಡೀಪ್‌ ಫೇಕ್‌ ವಿಡಿಯೋ ವೈರಲ್‌ – ಗರ್ಬಾ ನೃತ್ಯ ಮಾಡಿದ್ದು ನಾನೇ ಎಂದ ವ್ಯಕ್ತಿ