ಕೊಡಗು, ಕರಾವಳಿ ಭಾಗದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು

-ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿಯುವ ಭೀತಿ
-ಕೊಡಗಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ

ಬೆಂಗಳೂರು: ಕೊಡಗು, ಕರಾವಳಿ ಭಾಗದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಹಾಸನದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಕೊಡಗಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ಆದೇಶ ನೀಡಿದೆ. ಸೆ.29 ರವರೆಗೂ ಮಡಿಕೇರಿಯಿಂದ ಮೇಕೇರಿ, ತಾಳತ್‍ಮನೆ ಮಾರ್ಗವಾಗಿ ಓಡಾಡಬೇಕೆಂದು ಸೂಚನೆ ನೀಡಿದ್ದಾರೆ. ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಕೂಡ ಮುಳುಗಡೆಯಾಗಿದ್ದು, ರೈತರ ಹೊಲಗಳಿಗೆ ನೀರು ನುಗ್ಗಿದೆ.

ತುಂಗಾ, ಭದ್ರ, ಹೇಮಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇತ್ತ ಸಕಲೇಶಪುರ ತಾಲೂಕಿನ ಯಡಕುಮಾರಿ ಬಳಿ ರೈಲು ಹಳಿ ಮೇಲೆ ಭಾರೀ ಭೂ ಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ಮಾರ್ಗದ ರೈಲು ಹಾಸನದಲ್ಲಿ ಸ್ಥಗಿತಗೊಂಡಿದೆ. ಬುಧವಾರ ಕತ್ತಲೆ ಇದ್ದ ಕಾರಣ ಇಂದು ತೆರವು ಕಾರ್ಯ ನಡೆಯಲಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿದಿದ್ದು ದಡದಲ್ಲಿರುವ ನಿವಾಸಿಗಳು ಆತಂಕ ಎದುರಿಸುತ್ತಿದ್ದಾರೆ. ಸುಬ್ರಹ್ಮಣ್ಯ ಬಳಿಯ ಹೊಸ್ಮಠ ಸೇತುವೆ ಈ ಬಾರಿ ದಾಖಲೆ ಎಂಬಂತೆ ಆಗಸ್ಟ್ ತಿಂಗಳಲ್ಲಿಯೂ ಮುಳುಗಡೆಯಾಗಿದೆ. ಕುಕ್ಕೆ ದೇಗುಲದ ಸ್ನಾನಘಟ್ಟವೂ ಮುಳುಗಿದ್ದು ಪ್ರವಾಸಿಗರು ಭೀತಿ ಪಡುವಂತಾಗಿದೆ.

Comments

Leave a Reply

Your email address will not be published. Required fields are marked *