ರೈನಾ ಫಿಫ್ಟಿಗೆ ಪ್ರಧಾನಿ ಮೋದಿ ಫಿದಾ

ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತ ತಂಡದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು, 52 ಲಕ್ಷವನ್ನು ದೇಣಿಗೆ ನೀಡಿದ್ದು, ಟ್ವೀಟ್ ಮೂಲಕ ಪ್ರಧಾನಿ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

ಕೊರೊನಾ ವೈರಸ್‍ನಿಂದ ದೇಶ ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಈಗಾಗಲೇ 21 ದಿನ ಲಾಕ್‍ಡೌನ್ ಆಗಿರುವ ಭಾರತಕ್ಕೆ ಚಿತ್ರನಟರು ಮತ್ತು ಕ್ರೀಡಾಪಟುಗಳು ಕೊರೊನಾ ವಿರುದ್ಧ ಹೋರಾಡಲು ಶಕ್ತಿ ತುಂಬುತ್ತಿದ್ದಾರೆ. ಅದಕ್ಕಾಗಿಯೇ ಸುರೇಶ್ ರೈನಾ ಅವರು ಪ್ರಧಾನ ಮಂತ್ರಿ ನಿಧಿಗೆ ಮತ್ತು ಉತ್ತರ ಪ್ರದೇಶ ಸಿಎಂ ವಿಪತ್ತು ಪರಿಹಾರ ನಿಧಿಗೆ 52 ಲಕ್ಷ ದೇಣಿಗೆ ನೀಡಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ರೈನಾ ಅವರು, ಕೊರೊನಾ ವೈರಸ್ ಅನ್ನು ತಡೆಗಟ್ಟಲು ನಮ್ಮ ಕೈಯಲ್ಲಿ ಆದ ಸಹಾಯವನ್ನು ದೇಶಕ್ಕೆ ಮಾಡಬೇಕಿದೆ. ನಾನು ಕೂಡ 52 ಲಕ್ಷ ರೂ. ಗಳನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದೇನೆ. ಅದರಲ್ಲಿ 31 ಲಕ್ಷವನ್ನು ಪ್ರಧಾನಿ ಅವರ ನಿಧಿಗೆ ಮತ್ತು ಉಳಿದ 21 ಲಕ್ಷವನ್ನು ಉತ್ತರ ಪ್ರದೇಶದ ಸಿಎಂ ವಿಪತ್ತು ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ನಿಮ್ಮ ಕೈಯಲ್ಲಿ ಆದ ಸಹಾಯವನ್ನು ನೀವು ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ರೈನಾ ಅವರು ದೇಶಕ್ಕಾಗಿ ಮಾಡಿದ ಸೇವೆಗೂ ಮತ್ತು ದೇಶದ ಮೇಲಿರುವ ಅವರ ಪ್ರೀತಿಗೂ ಮೆಚ್ಚಿದ ಪ್ರಧಾನಿ ಮೋದಿ ಅವರು, ರೈನಾ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದಾರೆ. ಇದರಲ್ಲಿ ಇದು ಅದ್ಭುತವಾದ ಫಿಫ್ಟಿ ಎಂದು ಬರೆದುಕೊಂಡಿದ್ದಾರೆ. ರೈನಾ ಅವರ ದೇಶಪ್ರೇಮವನ್ನು ಕಂಡ ಅವರ ಅಭಿಮಾನಿಗಳು ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಸಹೋದರ ಜೈಹಿಂದ್ ಎಂದು ಕಮೆಂಟ್ ಮಾಡಿದ್ದಾರೆ.

ಕೊರೊನಾ ವೈರಸ್‍ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ದೇಶದ ಸಹಾಯಕ್ಕೆ ಬಂದಿರುವ ಸೆಲೆಬ್ರಿಟಿಗಳು ದೇಶಕ್ಕಾಗಿ ಧನ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅವರೇ ಹಸಿದವರಿಗೆ ಊಟದ ವ್ಯವಸ್ಥೆ, ನೀರು ಮಾಸ್ಕ್ ಗಳನ್ನು ನೀಡುತ್ತಿದ್ದಾರೆ. ದಕ್ಷಿಣ ಭಾರತದ ನಟರಾದ ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬು, ರಾಮ್ ಚರಣ್ ಎಲ್ಲರೂ ದೇಶಕ್ಕಾಗಿ ಧನಸಹಾಯ ಮಾಡುತ್ತಿದ್ದಾರೆ.

ಇಂದು ಕೂಡ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು, ಕೊರೊನಾ ವಿರುದ್ಧ ದೇಶ ಹೋರಾಡಲು ಬರೋಬ್ಬರಿ 25 ಕೋಟಿ ಧನಸಹಾಯ ಮಾಡಿದ್ದಾರೆ. ಈ ಸಮಯದಲ್ಲಿ ಜನರ ಪ್ರಾಣವೇ ಎಲ್ಲಕ್ಕಿಂತ ಮುಖ್ಯ. ಅದಕ್ಕಾಗಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕು. ನಾನು ನನ್ನ ಉಳಿತಾಯದ ಹಣದಲ್ಲಿ 25 ಕೋಟಿ ರೂ. ಗಳನ್ನು ನರೇಂದ್ರ ಮೋದಿಯವರ ಪರಿಹಾರ ನಿಧಿಗೆ ನೀಡುವುದಾಗಿ ಪ್ರಮಾಣಿಸುತ್ತಿದ್ದೇನೆ. ನಾವೆಲ್ಲ ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *