ಈಡನ್‌ ಗಾರ್ಡನ್‌ನಲ್ಲಿ ಗೆದ್ದ ಮಳೆ – PBKS vs KKR ಪಂದ್ಯ ರದ್ದು, 4ನೇ ಸ್ಥಾನಕ್ಕೇರಿದ ಪಂಜಾಬ್‌

ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ vs ಕೋಲ್ಕತ್ತಾ ನೈಟ್‌ ರೈಡರ್ಸ್‌ ನಡುವಿನ ಪಂದ್ಯದಲ್ಲಿ ಮಳೆಯಾಟ ಮೇಲುಗೈ ಸಾಧಿಸಿದೆ.

ನಿರಂತರ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿವೆ. ಇದರಿಂದ 11 ಅಂಕಗಳೊಂದಿಗೆ ಪಂಜಾಬ್‌ ಕಿಂಗ್ಸ್‌ 4ನೇ ಸ್ಥಾನಕ್ಕೆ ಜಿಗಿದರೆ, ಕೋಲ್ಕತ್ತಾ ನೈಟ್‌ರೈಡರ್ಸ್‌ 7 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿ ಉಳಿದಿದೆ. ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಗುಜರಾತ್‌ ಟೈಟಾನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ ಸ್ಥಾನ ಪಡೆದುಕೊಂಡಿವೆ.

ಗೆಲುವಿಗೆ 202 ರನ್‌ಗಳ ಗುರಿ ಪಡೆದ ಕೋಲ್ಕತ್ತಾ ರೆಹಮಾನುಲ್ಲಾ ಗುರ್ಬಾಜ್‌, ಸುನೀಲ್‌ ನರೇನ್‌ ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿತ್ತು. ಮೊದಲ ಓವರ್‌ನಲ್ಲಿ 7 ರನ್‌ ಗಳಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಇದರಿಂದ ರಾತ್ರಿ 11:44 ಗಂಟೆಗೆ 5 ಓವರ್‌ಗಳ ಪಂದ್ಯ ನಡೆಸಲು ಯೋಜಿಸಲಾಗಿತ್ತು. ಆದ್ರೆ ನಿರಂತರ ಮಳೆಯಾಗಿದ್ದರಿಂದ ಪಂದ್ಯವನ್ನು ಫಲಿತಾಂಶವಿಲ್ಲದೇ ರದ್ದುಗೊಳಿಸಲಾಯಿತು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ನಿಗದಿತ 20 ಓವರ್‌ ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 201 ರನ್‌ ಗಳಿಸಿತ್ತು. ಪಂಜಾಬ್‌ ಪರ ಬ್ಯಾಟಿಂಗ್‌ ಮಾಡಿದ್ದ ಪ್ರಿಯಾಂಶ್‌ ಆರ್ಯ 35 ಎಸೆತಗಳಲ್ಲಿ 4 ಸಿಕ್ಸ್‌, 8 ಬೌಂಡರಿ ಬಾರಿಸಿ 69 ರನ್‌, ಪ್ರಭಸಿಮ್ರನ್‌ ಸಿಂಗ್‌ 49 ಎಸೆತಗಳಲ್ಲಿ 6 ಸಿಕ್ಸ್‌ ಹಾಗೂ 6 ಬೌಂಡರಿ ಬಾರಿಸಿ 83 ರನ್‌ ಗಳಿಸಿದರು. ಶ್ರೇಯಸ್‌ ಅಯ್ಯರ್‌ 16 ಎಸೆತಗಳಲ್ಲಿ ತಲಾ ಒಂದೊಂದು ಸಿಕ್ಸ್‌ ಹಾಗೂ ಬೌಂಡರಿ ಹೊಡೆದು 25 ರನ್‌ ಗಳಿಸಿದರು. ಇನ್ನುಳಿದಂತೆ ಗ್ಲೆನ್‌ ಮ್ಯಾಕ್ಸ್‌ವೆಲ್‌ 8 ಎಸೆತಗಳಲ್ಲಿ 7ರನ್‌, ಮಾರ್ಕೊ ಜಾನ್ಸೆಮ್‌ 7 ಎಸೆತಗಳಲ್ಲಿ 3 ರನ್‌ ಹಾಗೂ ಜೋಶ್‌ ಇಂಗ್ಲಿಸ್‌ 6 ಎಸೆತಗಳಲ್ಲಿ 11 ರನ್‌ ಬಾರಿಸಿದರು.

ಕೋಲ್ಕತ್ತಾ ಪರ ಬೌಲಿಂಗ್‌ ಮಾಡಿದ ವೈಭವ್‌ ಅರೋರಾ 2 ವಿಕೆಟ್‌ ಕಬಳಿಸಿದರೆ, ವರುಣ್‌ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್‌ ತಲಾ ಒಂದು ವಿಕೆಟ್‌ ಪಡೆದರು.