ಬೆಂಗ್ಳೂರಲ್ಲಿ ದಾಖಲೆ ನಿರ್ಮಿಸಿದ ವರುಣ – ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಮಳೆ: ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಬೆಂಗಳೂರು: ಭಾನುವಾರ ರಾತ್ರಿ ಸುರಿದ ಮಳೆ ಬೆಂಗಳೂರಿನ ಇತಿಹಾಸದಲ್ಲಿಯೇ ದಾಖಲೆಯ ಮಳೆಯಾಗಿದ್ದು, ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ.

1988 ಸೆಪ್ಟೆಂಬರ್ 12 ರಂದು 177.6 ಮಿ.ಮೀ ಮಳೆ ಸುರಿದಿತ್ತು. ಆದರೆ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ 206 ಮಿ.ಮೀ ಮಳೆಯಾಗುವ ಮೂಲಕ ಹಿಂದಿನ ದಾಖಲೆಯನ್ನು ಮುರಿದಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನೂ ಎರಡು ಮೂರು ದಿನ ಇದೇ ರೀತಿ ಮಳೆಯ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಈಗಾಗಲೇ ನಿನ್ನೆ ನಗರದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಕನಕಪುರ ರಸ್ತೆಯಲ್ಲಿನ ಅಂಜನಾಪುರದಲ್ಲಿ 206 ಮಿ.ಮೀ ಮಳೆಯಾಗಿದೆ. ಇದು ಅತಿ ಹೆಚ್ಚು ಮಳೆಯಾಗಿರುವ ಪ್ರದೇಶವಾಗಿದ್ದು, ನಾವು ಊಹಿಸಿದ್ದಿಕ್ಕಿಂತಲೂ ಅಧಿಕ ಮಳೆಯಾಗಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಎರಡೂ ಕಡೆಯ ತೇವಾಂಶ ಮಿಶ್ರಿತ ಗಾಳಿ ಒಂದೆಡೆ ಸೇರಿ ಗಾಳಿಯ ಒತ್ತಡದಿಂದ ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲೂ ಕೂಡಾ ಹೆಚ್ಚು ಪ್ರಮಾಣದ ಮಳೆಯಾಗಿರುವ ದಾಖಲೆಯಾಗಿದೆ. ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೂ ಇದೇ ರೀತಿ ಮಳೆಯ ಮುನ್ಸೂಚನೆ ಇದೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಭಾಗದಲ್ಲಿ ಅತ್ಯಂತ ಹೆಚ್ಚು ಮಳೆ ಸುರಿದಿದ್ದು, ರಾತ್ರಿ ಬರೋಬ್ಬರಿ 200 ಮಿ.ಮೀ ಮಳೆ ಸುರಿದಿದೆ. ಬೊಮ್ಮನಹಳ್ಳಿ, ಎಚ್‍ಎಸ್‍ಆರ್ ಲೇಔಟ್, ಕೆಂಗೇರಿ, ರಾಜರಾಜೇಶ್ವರಿ ನಗರ ಪ್ರದೇಶಗಳಲ್ಲಿ 200 ಮಿ.ಮೀ ಮಳೆಯಾಗಿದೆ. ಮಳೆ ಮೋಡ ಹೆಚ್ಚಾಗಿರುವ ಕಾರಣ ರಾತ್ರಿ ಸುರಿದ ಮಳೆಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಬೆಂಗಳೂರು, ದಕ್ಷಿಣ ಕನ್ನಡ, ತುಮಕೂರು ಮತ್ತು ಮಂಡ್ಯದಲ್ಲೂ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಆಗಿರುವಂತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಡಿಸಿಪಿ ರವಿ ಚೆನ್ನಣ್ಣನವರ್, “ರಾಜ್ಯಾದ್ಯಂತ ಮುಂದಿನ ಒಂದು ವಾರ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕಾಗಿದ್ದು, ಕರಾವಳಿ ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಾದ್ಯಂತ ಇಂದಿನಿಂದ 5 ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *