ನಿರಂತರ ಸುರಿದ ಮಳೆಗೆ ಕೆರೆಯಂತಾದ ಅಡಿಕೆ ತೋಟ- ರೈತನ ಕಣ್ಣೀರು

ಗದಗ/ಹಾಸನ: ನಿರಂತರವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗದಗ, ಹಾಸನ ರೈತರು ಫಸಲನ್ನು ಕಳೆದುಕೊಂಡಿದ್ದಾರೆ. ಮಳೆಯ ಅವಾಂತರದಿಂದಾಗಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.

ನಿನ್ನೆ ತಡರಾತ್ರಿ ಸುರಿದ ಮಳೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ವರುಣನ ಅಟ್ಟಹಾಸಕ್ಕೆ ಜಿಲ್ಲೆಯ ಅಂತೂರು ಬೆಂತೂರ ಗ್ರಾಮದಲ್ಲಿ ಅನೇಕ ಬೆಳೆಗಳು ಹಾಳಾಗಿವೆ. ಅದರಲ್ಲಿ ಮಲ್ಲಿಕಾರ್ಜುನ ಗುಡಿಸಾಗರ್  ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆ ಹಾಳಾಗಿದೆ. ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

ಮಲ್ಲಿಕಾರ್ಜುನ ಅವರ ಜಮೀನಿನಲ್ಲಿ ರಾಶಿ ಮಾಡಲು ಕಿತ್ತು ಹಾಕಿದ ಶೇಂಗಾ ಬೆಳೆ ನೀರಲ್ಲಿ ತೇಲಿ ಹೋಗಿದೆ. ಕೈಗೆ ಬಂದ ತುತ್ತು ರೈತರ ಬಾಯಿಗೆ ಬರದಂತಾಗಿದೆ. ಸಾಲಸೂಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚುಮಾಡಿದ ಬೆಳೆಗಳೆಲ್ಲಾ ನೀರಲ್ಲಿ ಕೊಚ್ಚಿಹೋಗಿವೆ. ಸುಮಾರು 7 ಎಕರೆ ಜಮೀನಿನಲ್ಲಿ ಬೆಳೆದ ನೂರಾರು ಕ್ವಿಂಟಲ್ ಬೆಳೆ ನಷ್ಟವಾಗುತ್ತಿದೆ. ಹತ್ತಾರು ಲಕ್ಷದ ರೂಪಾಯಿ ಮೊತ್ತದ ಶೇಂಗಾ ಹಾಳಾಗಿದೆ. ಹಳ್ಳಕ್ಕೆ ತೇಲಿಬಂದ ಅಳಿದುಳಿದ ಬೆಳೆಯನ್ನು ರೈತರು ತೆಗೆದು ಹಾಕುವ ಕೆಲಸ ಮಾಡುತ್ತಿದ್ದಾರೆ. ವರುಣನ ಆರ್ಭಟಕ್ಕೆ ರೈತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಶೇಂಗಾ, ಮೆಣಸಿನ ಬೆಳೆ, ಈರುಳ್ಳಿ, ಮೆಕ್ಕೆಜೋಳ ಹೀಗೆ ಅನೇಕ ಬೆಳೆಗಳು ನೀರು ಪಾಲಾಗಿವೆ.

ಕೆರೆಯಂತಾದ ಅಡಿಕೆ ತೋಟ: ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕೋಡಿಬಿದ್ದ ಪರಿಣಾಮ ರೈತರ ನೂರಾರು ಎಕರೆ ಅಡಿಕೆ ತೋಟಕ್ಕೆ ನೀರು ನುಗ್ಗಿ ಜಮೀನು ನಾಶವಾಗುವ ಭೀತಿ ಎದುರಾಗಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿಯ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಳೇನಹಳ್ಳಿ ಗ್ರಾಮದ ಹಲವರು ಅಡಿಕೆ ಮತ್ತು ಎಲೆ ಅಂಬು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಕೆರೆ ಕೋಡಿ ಬಿದ್ದು ನೂರಾರು ಎಕರೆಗೆ ನೀರು ನುಗ್ಗಿದೆ. ಕಳೆದ ಒಂದು ವಾರದಿಂದ ತೋಟದಲ್ಲಿ ನೀರು ನಿಂತಿರುವುದರಿಂದ ಅಡಿಕೆ ಮರಗಳು ಬುಡ ಸಮೇತ ಬೀಳುವ ಹಂತ ತಲುಪಿವೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ. ಹೀಗೆ ಆದರೆ ನಮ್ಮಜೀವನ ಬೀದಿಗೆ ಬರಲಿದೆ ಎಂದು ರೈತರು ಅಸಹಾಯಕತೆ ಹೊರಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *