ನಗರದಲ್ಲಿ ಮುಂದುವರಿದ ಮಳೆರಾಯನ ಆರ್ಭಟ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾದ ಬೆನ್ನಲ್ಲೇ ನಗರದಲ್ಲಿ ಧಾರಕಾರ ಮಳೆ ಆಗಿದ್ದು, ರಾತ್ರಿ 8 ಗಂಟೆಯಿಂದ ನಗರದ ನಾನಾ ಭಾಗಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ.

ಕೆ.ಆರ್.ಪುರ ಮತ್ತು ಯಲಹಂಕ ಭಾಗಗಳಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ವಾಹನ ಸವಾರರಿಗೆ ತೊಂದರೆ ಅನುಭವಿಸಿದ್ದಾರೆ. ಸಿ.ವಿ.ರಾಮನ್ ನಗರದ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಜಲಾವೃತವಾಗಿದೆ. ವಾಹನ ಸವಾರರು ಬ್ರಿಡ್ಜ್ ದಾಟಲು ಹರಸಾಹಸ ಪಟ್ಟಿದ್ದಾರೆ. ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ ಮುಗಿಯದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ನಗರದ ಲಾಲ್‍ಬಾಗ್ ರೋಡ್, ಫ್ರೇಸರ್ ಟೌನ್, ಹೆಚ್ ಎಸ್ ಆರ್ ಲೇಔಟ್, ಶಾಂತಿನಗರ, ಸಿಲ್ಕ್ ಬೋರ್ಡ್ ಸುತ್ತಾಮುತ್ತಾ ಭರ್ಜರಿ ಮಳೆ ಆಗಿದೆ. ಇನ್ನೂ ಮೂರು ದಿನ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಕೆಲವಡೆ ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ ಜನರು ಸಮಸ್ಯೆ ಎದುರಿಸಿದ್ದರು. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2-3 ದಿನಗಳಲ್ಲಿ ಮಳೆಯಾಗುವ ಮನ್ಸೂಚನೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *