ಬೆಂಗ್ಳೂರಲ್ಲಿ ರಾತ್ರಿಯೂ ವರುಣನ ಅಬ್ಬರ- ಧರೆಗುರುಳಿತು 20ಕ್ಕೂ ಹೆಚ್ಚು ಮರ, ತುಮಕೂರಲ್ಲಿ ಇಬ್ಬರು ಬಲಿ

ಬೆಂಗಳೂರು: ನಗರದಲ್ಲಿ ಭಾನುವಾರ ಸಂಜೆ ಅಬ್ಬರಿಸಿದ್ದ ಮಳೆ ಮತ್ತೆ ರಾತ್ರಿ ಕೂಡ ಸುರಿದಿದೆ. ಜಿಲ್ಲೆಯ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ತ್ಯಾಗರಾಜನಗರದ ವಿದ್ಯಾಪೀಠ ಸರ್ಕಲ್ ಬಳಿ ಶ್ರೀ ಸಾಯಿ ಸನ್ನಿಧಿ ಅಪಾರ್ಟ್ ಮೆಂಟ್ ಸೆಲ್ಲರ್‍ಗೆ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ ಪರಿಣಾಮ 5 ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಕಾಂಪೌಂಡ್ ಕುಸಿದಿದ್ದಕ್ಕೆ 10 ಕ್ಕೂ ಹೆಚ್ಚು ಕಾರುಗಳು 6 ದ್ವಿಚಕ್ರ ವಾಹನಳಿಗೆ ಹಾನಿಯಾಗಿದೆ.

ನಗರದಲ್ಲಿ 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಕೆಲವು ಕಡೆ ಬಿರುಗಾಳಿ ಜೋರಾಗಿದ್ದ ಹಿನ್ನೆಲೆಯಲ್ಲಿ ಮರಗಳ ರೆಂಬೆಗಳು ಮುರಿದು ಬಿದ್ದಿವೆ. ವಿದ್ಯಾಪೀಠ ಸರ್ಕಲ್‍ನಲ್ಲಿ ಮಳೆ ನೀರು ನುಗ್ಗಿ ಕಾಂಪೌಂಡ್ ಕುಸಿದು ಅಪಾರ್ಟ್ ಮೆಂಟ್‍ನಲ್ಲಿ ನಿಲ್ಲಿಸಿದ್ದ ಕಾರಿಗೆ ಡ್ಯಾಮೇಜ್ ಆಗಿದೆ.

ಎಲ್ಲೆಲ್ಲಿ, ಎಷ್ಟೆಷ್ಟು ಮರ ಬಿದ್ದಿದೆ?:
ಕೊಡಿಗೇಹಳ್ಳಿ-1
ಸಹಕಾರನಗರ-2
ವಿದ್ಯಾರಣ್ಯಪುರ -2
ಕಾಚರಕನಹಳ್ಳಿ-1
ಸುಲ್ತಾನ್ ಪಾಳ್ಯ-1
ಲುಂಬಿಣಿಗಾರ್ಡನ್-1
ಹೆಚ್.ಬಿ.ಆರ್ ಲೇಔಟ್-1
ಲುಂಬಿಣಿಗಾರ್ಡನ್-1
ಹೆಚ್‍ಎಸ್‍ಆರ್.ಲೇಔಟ್-1 ಮರ ಬಿದ್ದ ವರದಿಯಾಗಿದೆ.

ಇತ್ತ ರಾಜ್ಯದ ಹಲವೆಡೆಯೂ ಭಾರೀ ಮಳೆಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿ 50 ವರ್ಷದ ರೈತ ಬಸವರಾಜು ಸೌಧೆ ತರಲು ಹೋದಾಗ ಸಿಡಿಲು ಬಡಿದು ಮೃತಪಟ್ಟರೆ, ಇದೇ ತಾಲೂಕಿನ ಹಂದನಕೆರೆ ಗ್ರಾಮ 75 ವರ್ಷದ ಗಂಗಮ್ಮ ದನ ಮೇಯಿಸಲು ಹೋದಾಗ ಶೆಡ್ ಕುಸಿದು ಸಾವನ್ನಪ್ಪಿದ್ದಾರೆ.

ಒಟ್ಟಿನಲ್ಲಿ ಬಿಸಿಲ ಧಗೆಗೆ ಬೇಸತ್ತಿದ್ದ ರಾಯಚೂರು, ಕಲಬುರಗಿ, ಬಳ್ಳಾರಿ, ಚಿತ್ರದುರ್ಗದಲ್ಲೂ ವರುಣ ಅಬ್ಬರಿಸಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ.

Comments

Leave a Reply

Your email address will not be published. Required fields are marked *