ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸುರಿದ ಭಾರಿ ಮಳೆ ಜೀವ ಹಾನಿ ಜೊತೆಗೆ ಅಪಾರ ಆಸ್ತಿ-ಪಾಸ್ತಿಗಳಿಗೂ ಹಾನಿಮಾಡಿದೆ. ಆದರೆ ಮಳೆಯಿಂದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಲಕ್ಷಾಂತರ ನಷ್ಟವಾದ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದು, ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಉತ್ತರ ಕನ್ನಡದ ಭಟ್ಕಳದಲ್ಲಿ ಸುರಿದ ಭಾರೀ ಮಳೆ ನೀರು ಮನೆ, ಅಂಗಡಿಗಳಿಗೆ ನುಗ್ಗಿ ಅವಾಂತರವನ್ನೇ ಸೃಷ್ಟಿಸಿದೆ. ಮನೆಗಳಿಗೆ ಪರಿಹಾರ ಸಿಕ್ಕರೂ ಅಂಗಡಿ ಮುಂಗಟ್ಟುಗಳಲ್ಲಿ ಆದ ಹಾನಿಗೆ ಸರ್ಕಾರದಿಂದ ಪರಿಹಾರ ಸಿಗುವುದಿಲ್ಲ. ಅಂಗಡಿಗೆ ಇನ್ಸುರೆನ್ಸ್ ಮಾಡಿಸಿದ್ದವರಿಗೆ ಮಾತ್ರ ಪರಿಹಾರ ಸಿಗುತ್ತದೆ. ಹೀಗಾಗಿ ಭಟ್ಕಳ ಮುಖ್ಯ ರಸ್ತೆಯಲ್ಲಿರುವ 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದ್ರು, ಬಹುತೇಕ ಅಂಗಡಿಗಳಿಗೆ ಇನ್ಸುರೆನ್ಸ್ ಇಲ್ಲದ ಕಾರಣ ಪರಿಹಾರ ಸಿಕ್ತಿಲ್ಲ. ಹಾಗೆ ಅಂಗಡಿಗಳಲ್ಲಿದ್ದ ವಸ್ತುಗಳನ್ನು ಮಾರುವುದು ಸಹ ಕಷ್ಟ. ಈ ಹಿನ್ನೆಲೆಯಲ್ಲಿ ಭಟ್ಕಳ ನಗರದ ಮುಖ್ಯರಸ್ತೆಯಲ್ಲಿರುವ ಬಹುತೇಕ ಅಂಗಡಿಯವರು ತಮ್ಮ ವಸ್ತುಗಳನ್ನು ಅರ್ಧಕ್ಕಿಂತ ಕಮ್ಮಿ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಇದರ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಭಟ್ಕಳ ನಗರದ ಮುಖ್ಯರಸ್ತೆಯಲ್ಲಿ ದುಬಾರಿ ವಸ್ತುಗಳನ್ನು ಕಮ್ಮಿ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಶಾಲಾ ಬ್ಯಾಗ್, ಎಲಿಕ್ಟ್ರಾನಿಕ್ಸ್ ವಸ್ತುಗಳು,ಪಾತ್ರೆಗಳು, ಬಟ್ಟೆಗಳು, ಚಪ್ಪಲಿಗಳು ಸೇರಿದಂತೆ ಅನೇಕ ವಸ್ತುಗಳನ್ನು ಅರ್ಧ ಬೆಲೆಗೆ ಸೇಲ್ ಮಾಡಲಾಗ್ತಿದೆ. ಮನೆ ಹಾನಿ ಪರಿಹಾರದ ಮಾದರಿಯಲ್ಲಿ ತಮಗೂ ಪರಿಹಾರ ನೀಡುವಂತೆ ಸರ್ಕಾರಕ್ಕೆ ಅಂಗಡಿ ಮಾಲೀಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಡರಾತ್ರಿ ರಾಜ್ಯಕ್ಕೆ ಅಮಿತ್ ಶಾ – ಸರಣಿ ಕೊಲೆ, ಕಾರ್ಯಕರ್ತರ ಆಕ್ರೋಶದ ಬಗ್ಗೆ ವರದಿ ಸಾಧ್ಯತೆ

ಭಟ್ಕಳದಲ್ಲಿ ನೀರಿನ ಅಬ್ಬರಕ್ಕೆ ತೇಲಿಹೋದ ಬೋಟುಗಳು ಸಮುದ್ರದಲ್ಲಿ ಪತ್ತೆಯಾಗುತ್ತಿದೆ. ಈ ಮಧ್ಯೆ ಮಳೆಯಿಂದಾಗಿ ಧರೆಯ ಮಣ್ಣು ಕೊಚ್ಚಿಹೋಗಿ ಸಮುದ್ರ ಕೆಂಪು ಬಣ್ಣಕ್ಕೆ ತಿರುಗಿದೆ. ಮುಂಗಾರು ಮಳೆ ಭಟ್ಕಳದ ಜನರನ್ನ ಅಕ್ಷರಶಃ ಕಾಡಿದೆ. ಸಾವು ನೋವುಗಳ ಜೊತೆ ಆರ್ಥಿಕ ನಷ್ಟವನ್ನೂ ತಂದೊಡ್ಡಿದೆ. ಇದರಿಂದ ಭಟ್ಕಳ ಮಂದಿ ಕಂಗಾಲಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ.

Leave a Reply