ಮಳೆಯಬ್ಬರಕ್ಕೆ ಮಾವು ಸೇರಿದಂತೆ ವಿವಿಧ ಬೆಳೆಗಳು ನಾಶ

ಕೋಲಾರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾವು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ನೆಲ ಕಚ್ಚಿವೆ.

ಕಳೆದ 3 ದಿನಗಳಿಂದ ಬೆಂಗಳೂರು ಮಾತ್ರವಲ್ಲದೆ ಕೋಲಾರ ಜಿಲ್ಲೆಯಲ್ಲೂ ಮಳೆಯ ಆರ್ಭಟ ಜೋರಾಗಿದೆ. ಈ ಮಧ್ಯೆ ಕಳೆದ ರಾತ್ರಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಕೆಜಿಎಫ್ ಹಾಗೂ ಬಂಗಾರಪೇಟೆ ತಾಲೂಕಿನಲ್ಲಿ ಬಿರುಗಾಳಿ ಸಹಿತ ಹೆಚ್ಚು ಮಳೆಯಾಗಿದ್ದು, ಬಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.

ಶ್ರೀನಿವಾಸಪುರ ತಾಲೂಕಿನ ಕದಿರಂಪಲ್ಲಿ ಗ್ರಾಮದ ಸುತ್ತಮುತ್ತ ಮಳೆಯಿಂದ ಮಾವಿನ ಕಾಯಿ ಮತ್ತು ಮರಗಳು ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಎದುರಾಗಿದೆ. ಗುಡುಗು, ಸಿಡಿಲು, ಬೀರುಗಾಳಿ ಸಹಿತ ಮಳೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮಾವಿನ ಕಾಯಿಗಳು ನೆಲಕಚ್ಚಿವೆ. ವರ್ಷಕ್ಕೆ ಒಂದೆ ಬೆಳೆಯಾಗಿರುವ ಮಳೆಯಿಂದ ರಾತ್ರೋರಾತ್ರಿ ಮಾವಿನ ಫಸಲು ಕಳೆದುಕೊಂಡ ರೈತರು ಕಣ್ಣೀರಿಡುವಂತಾಗಿದೆ. ಇನ್ನು ಒಂದು ತಿಂಗಳಲ್ಲಿ ಮಾವಿನ ಫಸಲು ಮಾರುಕಟ್ಟೆಗೆ ಹೋಗಿ ಒಂದಿಷ್ಟು ಹಣ ನೋಡಲು ಕಾತುರದಿಂದ ಕಾಯುತ್ತಿದ್ದ ರೈತನು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಮಾವಿನ ಫಸಲು ಮಳೆಯಿಂದ ನೆಲಕ್ಕುದುರಿ ಸುಮಾರು 8 ಲಕ್ಷ ರೂ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆ ಹಿಂದೆ ಯಾರೇ ಇರಲಿ, ಎತ್ತಾಕೊಂಡು ಒಳಗೆ ಹಾಕಿ: ಪ್ರಹ್ಲಾದ್ ಜೋಶಿ

ಹಲವೆಡೆ ತೆಂಗಿನ ಮರ ಹಾಗೂ ಕರೆಂಟ್ ಕಂಬಗಳು ನೆಲಕ್ಕುರುಳಿವೆ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸುತ್ತಮುತ್ತ ವಿವಿಧ ಹಣ್ಣು ತರಕಾರಿ ಬೆಳೆಗಳು ನಾಶವಾಗಿದೆ. ಶ್ರೀನಿವಾಸಪುರ ಪಟ್ಟಣದ ಪವನ್ ಆಸ್ಪತ್ರೆ ಬಳಿ ಸಿಡಿಲು ಬಡಿದ ಹಿನ್ನೆಲೆ ತೆಂಗಿನ ಮರ ಹೊತ್ತಿ ಉರಿದ ಘಟನೆ ಕೂಡ ನಡೆದಿದೆ.

ಕುಡಿಚರವು ಗ್ರಾಮದಲ್ಲಿ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಮೇಲ್ಚಾವಣಿ ಹಾನಿಯಾಗಿದೆ. ರಾತ್ರಿ ಸುರಿದ ಗುಡುಗು ಸಹಿತ ಮಳೆ ವೇಳೆ ಸಿಡಿಲು ಬಡಿದು ಮನೆಯ ಮೇಲ್ಚಾವಣಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದ್ದು, ಸರ್ಕಾರ ರೈತರಿಗೆ ನಷ್ಟ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರಚೋದನಕಾರಿ ಕೃತ್ಯ ಎಸಗಿದವರ ವಿರುದ್ಧ ಕ್ರಮ: ಬೊಮ್ಮಾಯಿ

Comments

Leave a Reply

Your email address will not be published. Required fields are marked *