ತಿಂಗಳಲ್ಲಿ 70 ಸಲ ನನ್ನ ಲೊಕೇಶನ್‌ ತೆಗೆಸುತ್ತಾರೆ: ಎಸ್‌ಪಿ ಮುಂದೆ ರಾಯಚೂರು ಬಿಜೆಪಿ ಶಾಸಕ ಅಳಲು

– ಶಾಸಕ ಶಿವರಾಜ್‌ ಪಾಟೀಲ್‌ ಚಲನವಲನಗಳ ಬಗ್ಗೆ ಗೂಢಚರ್ಯೆ?

ರಾಯಚೂರು: ನಗರ ಬಿಜೆಪಿ ಶಾಸಕ ಡಾ. ಶಿವರಾಜ್‌ ಪಾಟೀಲ್‌ (S.Shivaraj Patil) ತಮ್ಮ ಫೋನ್‌ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಎಸ್‌ಪಿಗೆ ದೂರು ನೀಡಿದ್ದಾರೆ.

ಶಿವರಾಜ್ ಪಾಟೀಲ್ ತಮ್ಮ ಹಿಂದೆ ಗೂಢಚರ್ಯೆ ನಡೆದಿದೆ, ತಿಂಗಳಲ್ಲಿ 70 ಸಾರಿ ನನ್ನ ಮೊಬೈಲ್ ಲೊಕೇಷನ್ ತೆಗೆಸುತ್ತಾರೆ. ಯಾಕೆ ತೆಗೆಸುತ್ತಿದ್ದಾರೋ ಗೊತ್ತಿಲ್ಲ ಎಂದು ರಾಯಚೂರು ಎಸ್‌ಪಿ ಪುಟ್ಟಮಾದಯ್ಯ ಬಳಿ ತಮ್ಮ ಅಳಲು ತೋಡಿಕೊಂಡಿದ್ದು, ಮೌಖಿಕ ದೂರು ನೀಡಿದ್ದಾರೆ.

ಪೊಲೀಸ್ ಸ್ಟೇಷನ್‌ನಿಂದಲೇ ನನ್ನ ಲೊಕೇಷನ್ ತೆಗಿಸ್ತಾರೆ. ಪೊಲೀಸ್ ಸ್ಟೇಷನ್‌ಗಳಿಗೆ ಹೋಗಿ ನನ್ನ ಲೊಕೇಷನ್ ತೆಗಿಸ್ತಾರೆ. ಇಂತಹ ಜನ ರಾಯಚೂರಿನಲ್ಲಿದ್ದಾರೆ. ಯಾಕೆ ತೆಗೆಸುತ್ತಾರೋ ಗೊತ್ತಿಲ್ಲ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಹೇಳಿದ್ದಾರೆ.

ಎಸ್‌ಪಿ ಕಚೇರಿಯಲ್ಲಿ ಪ್ರಕರಣವೊಂದರ ಕುರಿತು ಮಾತನಾಡುತ್ತಿದ್ದ ವೇಳೆ ತಮ್ಮ ಅಳಲು ತೋಡಿಕೊಂಡಿರುವ ಶಾಸಕ, ಪದೇ ಪದೇ ನನ್ನ ಮೊಬೈಲ್ ಲೊಕೇಷನ್ ಚೆಕ್ ಮಾಡುತ್ತಿದ್ದಾರೆ ಅಂತ ಪರೋಕ್ಷವಾಗಿ ಆಡಳಿತ ಪಕ್ಷದವರ ವಿರುದ್ಧ ಆರೋಪಿಸಿದ್ದಾರೆ. ಆದರೆ, ಯಾರು ಶಾಸಕರ ಲೊಕೇಷನ್ ತೆಗೆಸುತ್ತಿದ್ದಾರೆ? ಯಾಕೆ ತೆಗೆಸುತ್ತಿದ್ದಾರೆ ಎನ್ನುವುದು ಸ್ಪಷ್ಟಪಡಿಸಿಲ್ಲ.

ರಾಯಚೂರು ನಗರ ಶಾಸಕರ ಬೆನ್ನ ಹಿಂದೆ ಬಿದ್ದಿರುವುದು ಯಾರು? ಕಾರಣ ಏನು? ಶಾಸಕ ಡಾ.ಶಿವರಾಜ್ ಪಾಟೀಲ್ ಚಲನವಲನಗಳ ಗೂಢಚರ್ಯ ನಡೆದಿದೆಯಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಸರ್ಕಾರ ಯಾರದ್ದು ಇರುತ್ತೋ ಸಹಜವಾಗಿ ಪೊಲೀಸರು ಅವರ ಮಾತು ಕೇಳುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಡಾ.ಶಿವರಾಜ್ ಪಾಟೀಲ್ ಆರೋಪಿಸಿದ್ದಾರೆ.