ಬರ ಅಧ್ಯಯನ ಪ್ರವಾಸ – ತಹಸೀಲ್ದಾರರಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಬಿಎಸ್‍ವೈ

ರಾಯಚೂರು: ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಯಡಿಯೂರಪ್ಪನವರು ಇಂದು ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ಯಡಿಯೂರಪ್ಪ ಜಿಲ್ಲೆಯ ಲಿಂಗಸುಗೂರಿನ ಛತ್ತರ ತಾಂಡಾದಲ್ಲಿ ಬರ ಅಧ್ಯಯನ ಮಾಡಿದರು. ಈ ವೇಳೆ ಅಧಿಕಾರಿಗಳು ಕುಡಿಯುವ ನೀರು, ಉದ್ಯೋಗಗಳನ್ನು ಸರಿಯಾಗಿ ನೀಡಿಲ್ಲ ಎಂದು ಗ್ರಾಮಸ್ಥರು ಅಹವಾಲುಗಳನ್ನು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ಬಿಎಸ್‍ವೈ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಮಯದಲ್ಲಿ ಕುಡಿಯುವ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇದಕ್ಕೆ ಸ್ಥಳದಲ್ಲಿ ಇದ್ದ ತಹಶೀಲ್ದಾರ್ ಚಂದ್ರಕಾಂತ್ ಅವರ ಮೇಲೆ ಕೋಪಗೊಂಡ ಯಡಿಯೂರಪ್ಪ ತಹಶೀಲ್ದಾರ್ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ನಂತರ ಸರಿಯಾಗಿ ನೀರು ಪೂರೈಕೆ ಮಾಡುವಂತೆ ತಾಕೀತು ಮಾಡಿದರು.

ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಯಾವ ಕಾರಣಕ್ಕೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆದರೂ ಗ್ರಾಮ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಕೇವಲ ಶಾಲೆಯಲ್ಲಿ ವಾಸ್ತವ್ಯ ಹೂಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮೈತ್ರಿ ಸರಕಾರ ಬರ ನಿರ್ವಹಣೆ, ಕುಡಿಯುವ ನೀರು ಹಾಗು ಉದ್ಯೋಗ ನೀಡಲು ವಿಫಲವಾಗಿದೆ ಎಂದು ವಾಗ್ದಾಳಿ ಮಾಡಿದರು.

https://www.youtube.com/watch?v=ICaTbsE2JyA

ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿಗಳ ಕ್ರಮದ ಬಗ್ಗೆ ಕೇಳಿದಾಗ, ಸಿಎಂ ಮಾಧ್ಯಮಗಳಿಗೆ ಏನು ಮಾಡಲು ಸಾಧ್ಯವಿಲ್ಲ. ನಿಮ್ಮೊಂದಿಗೆ ನಾವು ಇದ್ದೇವೆ, ಮುಂದೆ ಸದನದಲ್ಲಿ ಮಾಧ್ಯಮಗಳ ಪರವಾಗಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *