ತೊಗರಿ ಖರೀದಿ ಕೇಂದ್ರದಲ್ಲಿ ಅವಧಿ ಮುಗಿದ ಟೀ ಪುಡಿ ಮಾರಾಟ- ಕೊಳ್ಳದಿದ್ರೆ ಹೆಸರು ನೋಂದಣಿಯಿಲ್ಲ

ರಾಯಚೂರು: ರೈತರ ಸರಣಿ ಹೋರಾಟಗಳ ಬಳಿಕ ಸರ್ಕಾರ ಗುರುವಾರದಿಂದ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಹೀಗಾಗಿ ಎಲ್ಲೆಡೆ ಹೆಸರು ನೋಂದಾಯಿಸಿಕೊಳ್ಳಲು ರೈತರು ತೊಗರಿ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಆದರೆ ರಾಯಚೂರಿನಲ್ಲಿ ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಕೇವಲ ಪಹಣಿ ಕೊಟ್ಟರೆ ಸಾಲದು, ಅವಧಿ ಮುಗಿದ ಟೀ ಪುಡಿಯನ್ನ ಕೊಂಡುಕೊಂಡರೆ ಮಾತ್ರ ಹೆಸರು ನೋಂದಣಿ ಮಾಡಿಕೊಳ್ಳುವುದಾಗಿ ಷರತ್ತು ಹಾಕಲಾಗಿದೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆಯಲಾದ ತೊಗರಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ರೈತರು ಪಹಣಿ ಜೊತೆ 50 ರೂ. ಕೊಟ್ಟು ಎರಡು ಟೀ ಪುಡಿ ಪ್ಯಾಕೇಟ್ ಕೊಂಡುಕೊಳ್ಳುತ್ತಿದ್ದಾರೆ. ನಫೆಡ್ ಕಂಪನಿಯ ಟೀ ಪುಡಿ ಪ್ಯಾಕೇಟ್ ಮಾರಲಾಗುತ್ತಿದೆ. ಅವುಗಳ ಅವಧಿ ನವೆಂಬರ್ 2019ಕ್ಕೆ ಮುಗಿದಿದ್ದರೂ ರೈತರು ಅನಿವಾರ್ಯವಾಗಿ ಕೊಳ್ಳುತ್ತಿದ್ದಾರೆ. ಒಂದು ಪಹಣಿಗೆ ಎರಡು ಪ್ಯಾಕೇಟ್ ಮಾಡಿರುವ ತೊಗರಿ ಕೇಂದ್ರದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ವಿಧಿಯಿಲ್ಲದೆ ಹೆಸರು ನೋಂದಾಯಿಸಿ ಟೀ ಪ್ಯಾಕೆಟ್ ತೆಗೆದುಕೊಳ್ಳುತ್ತಿದ್ದಾರೆ.

ಕ್ವಿಂಟಾಲ್‍ಗೆ 6,100 ರೂಪಾಯಿ ಬೆಂಬಲ ಬೆಲೆ ಕೊಡುತ್ತಿರುವ ಸರ್ಕಾರ ಒಂದು ಎಕರೆಗೆ 5 ಕ್ವಿಂಟಾಲ್ ಹಾಗೂ ರೈತ ಎಷ್ಟೇ ಬೆಳೆದಿದ್ದರೂ ಗರಿಷ್ಠ 10 ಕ್ವಿಂಟಾಲ್ ಮಾತ್ರ ಖರೀದಿ ಮಾಡಲು ಮುಂದಾಗಿದೆ. ಜೊತೆಗೆ 50 ರೂಪಾಯಿ ಕೊಟ್ಟು ಟೀ ಪುಡಿ ಖರೀದಿಸಬೇಕಿದೆ. ಹೀಗಾಗಿ ಟೀ ಪುಡಿ ಬದಲು ವಿಷವನ್ನೇ ಕೊಟ್ಟುಬಿಡಿ ಎಂದು ಜೆಗರಕಲ್ ಗ್ರಾಮದ ರೈತ ದೇವೇಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ತೊಗರಿ ಖರೀದಿ ಕೇಂದ್ರದ ವ್ಯವಸ್ಥಾಪಕ ನರಸಿಂಹಪ್ಪ ಮಾತ್ರ ನನಗೇ ಏನೂ ಗೊತ್ತೇ ಇಲ್ಲಾ. ಪ್ರೀತಿಯಿಂದ ಟೀ ಪುಡಿ ಖರೀದಿಸಬಹುದು ಅಷ್ಟೇ. ಒತ್ತಾಯ ಪೂರ್ವಕವಾಗಿ ಮಾರಾಟ ಮಾಡಬಾರದು. ನಾನು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ಯಾವುದೋ ಒತ್ತಡಕ್ಕೆ ರೈತರ ತಲೆಗೆ ಅವಧಿ ಮುಗಿದ ಟೀ ಪುಡಿ ಕಟ್ಟುತ್ತಿದ್ದಾರೆ. ಇದನ್ನ ಕೂಡಲೇ ನಿಲ್ಲಿಸಬೇಕು ತೊಗರಿ ಖರೀದಿ ಪ್ರಮಾಣ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *