ರಾಯಚೂರಿನ ರಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಇಡೀ ರಾತ್ರಿ ಪರದಾಡಿದ ಗರ್ಭಿಣಿ

ರಾಯಚೂರು: ಯಾವುದೇ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಬಂದ್ ಮಾಡಿದರೆ ಲೈಸೆನ್ಸ್ ರದ್ದು ಮಾಡುತ್ತೇನೆ ಅಂತ ಆರೋಗ್ಯ ಸಚಿವರೇನೋ ಖಡಕ್ ಆದೇಶ ಹೊರಡಿಸಿದ್ದಾರೆ.  ಸಚಿವರ ಉಸ್ತುವಾರಿ ಜಿಲ್ಲೆ ರಾಯಚೂರಿನ ಸರ್ಕಾರಿ ವೈದ್ಯಕೀಯ ಬೋಧಕ ಆಸ್ಪತ್ರೆ ರಿಮ್ಸ್ ನಲ್ಲಿ ತುಂಬು ಗರ್ಭಿಣಿಯನ್ನ ದಾಖಲಿಸಿಕೊಳ್ಳದೇ ರಾತ್ರಿ ಇಡೀ ಅಲೆದಾಡಿಸಿದ ಘಟನೆ ನಡೆದಿದೆ.

ವೈದ್ಯರ ಕೊರತೆ ನೆಪವೊಡ್ಡಿ ಗರ್ಭಿಣಿಯನ್ನ ದಾಖಲು ಮಾಡಿಕೊಳ್ಳದೇ ಆಸ್ಪತ್ರೆಯಿಂದ ಸಿಬ್ಬಂದಿ ಹೊರ ಹಾಕಿದ್ದಾರೆ. ಸಂಜೆ ಐದು ಗಂಟೆ ಸುಮಾರಿಗೆ ಬಂದ ಸಿರವಾರ ಪಟ್ಟಣದ ಗರ್ಭಿಣಿ ಮೋಹಿನಾ ಬೇಗಂ ಳನ್ನ ವೈದ್ಯರಿಲ್ಲ ಅನ್ನೋ ನೆಪವೊಡ್ಡಿ ರಾತ್ರಿ ವಾಪಸ್ ಕಳಿಸಿದ್ದರು. ಅಲ್ಲಿಂದ ನಗರದ ನವೋದಯ ಬೋಧಕ ಆಸ್ಪತ್ರೆಗೆ ತೆರಳಬೇಕಾಯಿತು. ಆದರೆ ನವೋದಯ ಆಸ್ಪತ್ರೆಯಲ್ಲಿ ರಕ್ತದ ಕೊರತೆ ನೆಪವೊಡ್ಡಿ ವಾಪಸ್ ರಿಮ್ಸ್ ಗೆ ಹೋಗುವಂತೆ ಅಲ್ಲಿನ ವೈದ್ಯರು ಸೂಚಿಸಿದರು. ಇದರಿಂದ ಕ್ರೂಸರ್ ವಾಹನದಲ್ಲೇ ಮಹಿಳೆಯನ್ನ ಕರೆದುಕೊಂಡು ಕುಟುಂಬಸ್ಥರು ತಿರುಗಾಡಿದರು.

ತಡರಾತ್ರಿಯಾದ್ರೂ ಯಾವ ಆಸ್ಪತ್ರೆಯಲ್ಲೂ ದಾಖಲು ಮಾಡಿಕೊಳ್ಳದ್ದಕ್ಕೆ ಕಂಗಾಲಾಗಿದ್ದ ಕುಟುಂಬಸ್ಥರು ವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ದಾರಿ ಕಾಣದೇ ಪುನಃ ರಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ನಂತರ ರಿಮ್ಸ್ ನ ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಹೆರಿಗೆಯ ಸಮಯದ ಮೀರಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೆರಿಗೆ ಮಾಡಲಾಗಿದೆ. ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿದ್ದು ಸದ್ಯ ರಿಮ್ಸ್ ಆಸ್ಪತ್ರೆಯಲ್ಲೇ ತಾಯಿ, ಮಗು ಆರೋಗ್ಯವಾಗಿದ್ದಾರೆ.

Comments

Leave a Reply

Your email address will not be published. Required fields are marked *