ಏಕಾಏಕಿ ಈರುಳ್ಳಿ ವ್ಯಾಪಾರ ಸ್ಥಗಿತ- ರೈತರಿಂದ ಪ್ರತಿಭಟನೆ

ರಾಯಚೂರು: ಈರುಳ್ಳಿ ಬೆಲೆ ಗೊಂದಲದಿಂದ ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು ಏಕಾಏಕಿ ವ್ಯಾಪಾರ ಸ್ಥಗಿತಗೊಂಡಿದೆ.

ಮುನ್ಸೂಚನೆ ಇಲ್ಲದೆ ಏಕಾಏಕಿ ಈರುಳ್ಳಿ ಖರೀದಿ ಸ್ಥಗಿತಗೊಳಿಸಿದ್ದರಿಂದ ನೂರಾರು ರೈತರು ಎಪಿಎಂಸಿ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ಖರೀದಿದಾರರು ಟೆಂಡರ್ ಹಾಕಲು ಬಾರದೇ ಇರುವುದರಿಂದ ರೊಚ್ಚಿಗೆದ್ದ ಈರುಳ್ಳಿ ಬೆಳೆಗಾರರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈರುಳ್ಳಿ ಮಾರಾಟ ಮಾಡಲು ಬಂದ ರೈತರು ವಾಪಸ್ಸು ಹೋಗಲು ನಿರಾಕರಿಸಿ ಖರೀದಿದಾರರು ಟೆಂಡರ್ ಹಾಕುವವರೆಗೂ ಪ್ರತಿಭಟನೆ ಮಾಡುವುದಾಗಿ ಪಟ್ಟುಹಿಡಿದರು. ಕೊನೆಗೆ ಹೋರಾಟಕ್ಕೆ ಮಣಿದಿರುವ ಅಧಿಕಾರಿಗಳು ನಾಳೆ ಬೆಳಗ್ಗೆ 10 ಗಂಟೆಯಿಂದ ವ್ಯಾಪಾರ ಆರಂಭಿಸಲು ಖರೀದಿದಾರರಿಗೆ ಸೂಚಿಸಿದ್ದು, ವ್ಯಾಪಾರಕ್ಕೆ ಖರೀದಿದಾರರು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

ಶುಕ್ರವಾರ ಕ್ವಿಂಟಾಲ್ ಈರುಳ್ಳಿ 15 ಸಾವಿರ ರೂಪಾಯಿವರೆಗೆ ಮಾರಾಟವಾಗಿತ್ತು. ಈಗ ಬೆಲೆ ಇಳಿಕೆಯ ಲಕ್ಷಣಗಳು ಕಂಡಿದ್ದು ವ್ಯಾಪಾರಸ್ಥರು ಖರೀದಿಯಿಂದಲೇ ದೂರ ಉಳಿದಿದ್ದಾರೆ. ರಾಯಚೂರು ಎಪಿಎಂಸಿಯಿಂದ ಹೈದರಾಬಾದ್ ಹಾಗೂ ಚೆನೈಗೆ ಹೋದ ಲೋಡ್ ಗಳು ಬೇಡಿಕೆ ಕುಸಿದು ದಾರಿಯಲ್ಲೇ ನಿಂತಿರುವ ಕಾರಣ ಗೊಂದಲದಲ್ಲಿರುವ ವ್ಯಾಪಾರಸ್ಥರು ಖರೀದಿಗೆ ಹಿಂದೇಟು ಹಾಕಿದ್ದಾರೆ. ಅಲ್ಲದೆ ಹೊರದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ ಅಂತ ಭಾವಿಸಿ ವ್ಯಾಪಾರ ಸ್ಥಗಿತಗೊಳಿಸಿದ್ದರು.

ನಾಳೆಯಿಂದ ಖರೀದಿ ಪ್ರಕ್ರಿಯೇ ಆರಂಭವಾಗುತ್ತೆ ಅಂತ ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಂಗನಾಥ್ ತಿಳಿಸಿದ್ದಾರೆ. ಅಧಿಕಾರಿಗಳ ಮನವೊಲಿಕೆಯಿಂದ ರೈತರು ಹೋರಾಟವನ್ನ ಹಿಂಪಡೆದಿದ್ದಾರೆ.

Comments

Leave a Reply

Your email address will not be published. Required fields are marked *