ರಾಯಚೂರಿನಲ್ಲಿ ವೈದ್ಯಕೀಯ ಸಿಬ್ಬಂದಿಗೆ 3 ತಿಂಗಳಿಂದ ಸಂಬಳವನ್ನೇ ನೀಡಿಲ್ಲ!

ರಾಯಚೂರು: ಕೊರೊನಾ ವಿರುದ್ಧ ಆರೋಗ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಆದರೆ ರಾಯಚೂರಿನಲ್ಲಿ ಇವರ ಸೇವೆಗೆ ಬೆಲೆಕಟ್ಟುವುದಿರಲಿ ಸರಿಯಾಗಿ ಸಂಬಳವನ್ನೇ ನೀಡುತ್ತಿಲ್ಲ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.

ಹೌದು. ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಕೋವಿಡ್ ಆಸ್ಪತ್ರೆಗಳಾದ ರಾಯಚೂರಿನ ಓಪೆಕ್ ಹಾಗೂ ರಿಮ್ಸ್ ಸಿಬ್ಬಂದಿಗೆ ಮೂರು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ. ವೇತನವಿಲ್ಲದೆ ಸಾವಿರಕ್ಕೂ ಅಧಿಕ ಸಿಬ್ಬಂದಿ ನಿತ್ಯ ದುಡಿಯುತ್ತಿದ್ದಾರೆ. ರಿಮ್ಸ್‍ನಲ್ಲಿ ಬಹುತೇಕ ಸಿ ಹಾಗೂ ಡಿ ಗ್ರೂಪ್ ನೌಕರರಿಗೆ ವೇತನವಾಗಿಲ್ಲ.

ರಿಮ್ಸ್ ಒಂದರಲ್ಲಿ ಪ್ರತಿ ತಿಂಗಳು 5 ಕೋಟಿ ರೂಪಾಯಿ ವೇತನಕ್ಕಾಗಿ 1.5 ಕೋಟಿ ಆಸ್ಪತ್ರೆಯ ನಿರ್ವಹಣೆಗಾಗಿ ಅನುದಾನ ಬೇಕಾಗಿದೆ. 2019-20ರ ಕೊನೆಯ ತ್ರೈಮಾಸಿಕದಲ್ಲಿ ಅನುದಾನದ ಕೊರತೆಯಾಗಿದೆ. ಅನುದಾನ ನೀಡಿ ಎಂದು ರಿಮ್ಸ್ ಆಡಳಿತಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇಷ್ಟರಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಬಗ್ಗೆ ಆಶಾಭಾವನೆಯಲ್ಲಿದ್ದಾರೆ. ಸಿಬ್ಬಂದಿ ಮಾತ್ರ ದುಡಿದು ದುಡಿದು ಸಾಲಗಾರರಾಗಿದ್ದಾರೆ ಎಂದು ರಿಮ್ಸ್ ಆಡಳಿತಾಧಿಕಾರಿ ನೂರ್ ಜಾನ್ ಖಾನ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ರಾಯಚೂರಿನ ಓಪೆಕ್ ಹಾಗೂ ರಿಮ್ಸ್ ಸಿಬ್ಬಂದಿಯನ್ನ ಸರ್ಕಾರ ನಿರ್ಲಕ್ಷ್ಯಿಸಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರೋ ಈ ಸಿಬ್ಬಂದಿಗೆ ಆದಷ್ಟು ಬೇಗ ಸಂಬಳ ಬಿಡುಗಡೆ ಮಾಡಬೇಕಿದೆ.

Comments

Leave a Reply

Your email address will not be published. Required fields are marked *