ಇಡೀ ರಸ್ತೆಗೆ ಭಯಂಕರ ಮಾಟ ಮಂತ್ರ- ದಾರಿಯಲ್ಲಿ ಓಡಾಡಲು ಹೆದರುತ್ತಿರುವ ಜನ

ರಾಯಚೂರು: ವೈಜ್ಞಾನಿಕವಾಗಿ ಸಮಾಜ ಎಷ್ಟೇ ಮುಂದುವರಿದಿದ್ದರೂ ಮೂಢನಂಬಿಕೆ ಇನ್ನೂ ಆಳವಾಗೇ ಬೇರೂರಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ರಾಯಚೂರು ನಗರ ಹತ್ತಿರದ ಮನ್ಸಲಾಪುರ ಮರ್ಚೆಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಮಾಟ ಮಾಡಿಸಲಾಗಿದೆ.

ನಾಲ್ಕು ಮಡಕೆಗಳಿಗೆ ಕರಿ ಬಟ್ಟೆ ಸುತ್ತಲಾಗಿದ್ದು, ಅದರ ಪಕ್ಕ ನಾಲ್ಕು ಮಣ್ಣಿನ ಗೊಂಬೆಗಳನ್ನು ಮಾಡಲಾಗಿದೆ. ಅವುಗಳಿಗೆ ಟಾಚನ್ ಪಿನ್ ಗಳನ್ನು ಚುಚ್ಚಲಾಗಿದೆ. ಅದರ ಜತೆಗೆ ನಿಂಬೆಹಣ್ಣು, ಕವಡೆ, ಈರುಳ್ಳಿ ಮೊಟ್ಟೆಗಳನ್ನು ಇಡಲಾಗಿದೆ. ಹತ್ತಾರು ದೀಪಗಳನ್ನು ಹೊತ್ತಿಸಲಾಗಿದೆ. ಇದು ಭಾನಾಮತಿ ಇರಬಹುದು ಅಂತ ಶಂಕಿಸಲಾಗಿದೆ.

ಮರ್ಚೆಡ್ ರಾಯಚೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮನ್ಸಲಾಪುರ ರಸ್ತೆ ಬಳಿ ಭಾನುವಾರ ರಾತ್ರಿ ಈ ಕೃತ್ಯ ಎಸಗಲಾಗಿದ್ದು, ಮೂರು ರಸ್ತೆಗಳು ಸೇರುವುದರಿಂದ ಈ ಸ್ಥಳದಲ್ಲಿ ಮಾಟ ಮಾಡಿರಬಹುದು ಎನ್ನಲಾಗಿದೆ. ಇದು ಮುಖ್ಯರಸ್ತೆಯಾಗಿರುವುದರಿಂದ ನಿತ್ಯ ಸಾವಿರಾರು ಜನ ಇಲ್ಲಿ ಓಡಾಡುತ್ತಾರೆ. ಆದರೆ ಈಗ ಇದನ್ನು ಕಂಡು ಭಯಭೀತರಾಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಹತ್ತಿರ ಬೈಪಾಸ್ ರಸ್ತೆಯಲ್ಲೂ ಭಾರೀ ಪ್ರಮಾಣದ ಮಾಟ ಮಾಡಿಸಲಾಗಿತ್ತು. ಪದೇಪದೆ ಇಂಥಹ ಘಟನೆಗಳು ಮರುಕಳಿಸುತ್ತಿರುವುದರಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಈ ಕೃತ್ಯ ಎಸಗುತ್ತಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಅಂತ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *