ವಿಫಲವಾದ ಕೆಐಎಡಿಬಿ ವಸತಿ ಯೋಜನೆಗೆ ಸರ್ಕಾರರಿಂದ ಮರುಜೀವ?

ರಾಯಚೂರು: ನಗರದ ಯರಮರಸ್ ಬಳಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಕೆಐಎಡಿಬಿ ವತಿಯಿಂದ ನಿರ್ಮಿಸಲಾಗಿರುವ ನೂರಾರು ಮನೆಗಳು ಉದ್ಘಾಟನೆಗೂ ಮುನ್ನವೇ ಶಿಥಿಲಾವಸ್ಥೆಗೆ ತಲುಪಿವೆ. ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಕೈಗಾರಿಕೆಗಳ ಕಾರ್ಮಿಕರು, ಉದ್ಯೋಗಸ್ಥರಿಗಾಗಿ ನಿರ್ಮಿಸಿದ ವಿವಿಧ ಹಂತದ ನೂರಾರು ಮನೆಗಳು ಹಂಚಿಕೆಯಾಗದೆ ಹಾಗೇ ಉಳಿದಿವೆ. ಮನೆಗಳಲ್ಲಿ ಯಾರೂ ವಾಸಮಾಡದೇ ಅನೈತಿಕ ಚಟುವಟಿಕೆಗಳಿಗೆ ಪ್ರದೇಶ ಆಸರೆಯಾಗಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿ ಬರುವ ಕೆಐಎಡಿಬಿ ವತಿಯಿಂದ ಜಿಲ್ಲಾ ಕೈಗಾರಿಕಾ ಅಭಿವೃದ್ಧಿ ಕಾರ್ಯ ಮತ್ತು ರಾಯಚೂರಿನಲ್ಲಿ ವಿವಿಧ ಅಳತೆಯ ಹೌಸಿಂಗ್ ಪ್ಲಾಟ್‍ಗಳನ್ನು ನಿರ್ಮಾಣ ಮಾಡಿ ಈಗಾಗಲೇ 10 ವರ್ಷಗಳು ಕಳೆದಿದ್ದು, ಒಂದು ಮನೆಯನ್ನು ಹಂಚಿಕೆ ಮಾಡದೆ ವಿಳಂಬ ಮಾಡುತ್ತಿರುವುದರಿಂದ ವಸತಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಮನೆಗಳು ಹಂಚಿಕೆಯಾಗದೆ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ. ಓಪನ್ ಫ್ಲ್ಯಾಟ್ ಹಾಗೂ ಮನೆಗಳಿಗೆ ಮನಸೋಇಚ್ಚೆ ಅವೈಜ್ಞಾನಿಕ ದರ ನಿಗದಿ ಮಾಡಿದ್ದರಿಂದ ಖರೀದಿಗೆ ಯಾರೂ ಮುಂದೆ ಬಂದಿರಲಿಲ್ಲ. ದರ ಇಳಿಕೆಗೆ ಸಾಕಷ್ಟು ಬಾರಿ ವಿವಿಧ ಕಾರ್ಮಿಕ, ವಾಣಿಜ್ಯೋದ್ಯಮ ಸಂಘಗಳು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ರಸ್ತೆ, ವಿದ್ಯುತ್ ದೀಪ ಸೇರಿದಂತೆ ಕೆಲವಾರು ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಬಳಿಕವೂ ಫ್ಲ್ಯಾಟ್, ಮನೆಗಳನ್ನ ಹಂಚಿಕೆ ಮಾಡಿಲ್ಲ. 10 ವರ್ಷಗಳಾದ್ರೂ ಇನ್ನೂ ಕೆಲಸಗಳು ಅಪೂರ್ಣವಾಗಿರುವ ಹಿನ್ನೆಲೆ ಸರ್ಕಾರ ಈಗ ಎಚ್ಚೆತ್ತಿದೆ. ರಾಜ್ಯ ವಿಧಾನಸಭೆಯ ಅಂದಾಜುಗಳ ಸಮಿತಿ ರಾಯಚೂರಿಗೆ ಭೇಟಿ ನೀಡಲಿದ್ದು ಡಿಸೆಂಬರ್ 18 ರಂದು ಪರಿಶೀಲನೆ ನಡೆಸಲಿದೆ. ಮೂಲಭೂತ ಸೌಕರ್ಯಗಳು ಹಾಗೂ ಕೈಗಾರಿಕಾ ಪ್ರದೇಶಾಭಿವೃದ್ಧಿ ಬಗ್ಗೆ ವೀಕ್ಷಣೆ ನಡೆಸಿ, ಸುರಾನಾ ಕೈಗಾರಿಕೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಿದೆ.

ಸಮಿತಿಯ ಅಧ್ಯಕ್ಷ ಸಿ.ಎಂ. ಉದಾಸಿ. ಸಮಿತಿಯ ಸದಸ್ಯರಾದ ರಾಮಲಿಂಗಾರೆಡ್ಡಿ, ಅಮರೇಶಗೌಡ ಲಿಂಗನಗೌಡ ಪಾಟೀಲ ಬಯ್ಯಾಪುರ, ಸತೀಶ್ ಎಲ್.ಜಾರಕಿಹೊಳಿ, ಕೌಜಲಗಿ ಮಹಾಂತೇಶ ಶಿವಾನಂದ, ಶರಣಬಸಪ್ಪಗೌಡ ದರ್ಶನಾಪುರ, ಅಭಯ್ ಪಾಟೀಲ್ ಸೇರಿ ಇತರರು ಪರಿಶೀಲನೆ ನಡೆಸಿ ಚರ್ಚೆ ಮಾಡಲಿದ್ದಾರೆ.

Comments

Leave a Reply

Your email address will not be published. Required fields are marked *