ದೇವೇಗೌಡ್ರ ಮಾತುಗಳನ್ನು ಅನುಮಾನದಿಂದ ನೋಡಲ್ಲ – ಸಿ.ಟಿ ರವಿ

ರಾಯಚೂರು: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಒಬ್ಬ ಅನುಭವಿ ರಾಜಕಾರಣಿ. ನಾನು ಅವರ ಮಾತುಗಳನ್ನ ಅನುಮಾನದಿಂದ ನೋಡಲ್ಲ ಎಂದು ಸಿಎಂಗೆ ಎಚ್‌ಡಿಡಿ ಕರೆ ಮಾಡಿ ಮಾತನಾಡಿರುವ ವಿಚಾರಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಹಿನ್ನೆಲೆಯಲ್ಲಿ ದೇವೇಗೌಡರು ಸರ್ಕಾರ ಸುಭದ್ರವಾಗಿರಲಿ ಅಂತ ಹೇಳಿದ್ದಾರೆ ಗೊತ್ತಿಲ್ಲ. ಒಂದು ವೇಳೆ ಚುನಾವಣೆ ನಡೆದರೆ ಹೆಚ್ಚಿನ ಸ್ಥಾನ ಬಿಜೆಪಿ ಗೆಲ್ಲುತ್ತದೆ. ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಸರ್ಕಾರ ಉರುಳಿಸಲು ನಡೆದಿರುವ ಯಾವ ಪ್ರಯತ್ನಗಲೂ ಸಾಧ್ಯವಾಗುವುದಿಲ್ಲ. ಮೈತ್ರಿ ವಿಚಾರ ಮಾತನಾಡಲು ನಾನು ಅಷ್ಟು ದೊಡ್ಡವನಲ್ಲ. ಕಾಂಗ್ರೆಸ್ ನವರದ್ದು ಗರತಿ ರಾಜಕಾರಣ ಎಂದು ವಾಗ್ದಾಳಿ ನಡೆಸಿದರು.

ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಆರು ಜನ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಸೆಳೆದಿತ್ತು. ಸಿ.ಭೈರೇಗೌಡರ ಸಿಡಿಯನ್ನ ವೀರಪ್ಪಮೊಯ್ಲಿ ಮೂಲಕ ಹೊರ ಬಿದ್ದಿತ್ತು. 1999-2004ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಮತ್ತು ಜೆಡಿಯು ಶಾಸಕರನ್ನ ತೆಕ್ಕೆಗೆ ಹಾಕೊಂಡಿತ್ತು. ಇದು ಯಾವ ಸೀಮೆಯ ರಾಜಕಾರಣ ಎಂದು ಸಚಿವರು ಪ್ರಶ್ನಿಸಿದರು.

ಚಲುರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ಜಮೀರ್ ಅಹ್ಮದ್, ಶ್ರೀನಿವಾಸ್ ಯಾವ ಪಕ್ಷದಲ್ಲಿದ್ದರು. ಇವರನ್ನೆಲ್ಲ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲಿಲ್ವಾ? ಈವಾಗ ಕಾಂಗ್ರೆಸ್ ಪಕ್ಷ ಬಿಜೆಪಿ ಬಗ್ಗೆ ಮಾತನಾಡುತ್ತಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಬಂದಂಗಾಯ್ತು.ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ ಎಂದು ಕಿಡಿಕಾರಿದರು.

ಸಿಎಂ ಇಬ್ರಾಹಿಂರಂತಹ ಗರತಿಯರು ರಾಜಕಾರಣದಲ್ಲಿ ಬೇಕಾ?. ಒಂದು ಪಕ್ಷದಲ್ಲಿ ಉಪಮುಖ್ಯಮಂತ್ರಿ ಇದ್ದು ಅಹಿಂದ ರಾಜಕೀಯ ಮಾಡಿದ್ದು ಗರತಿ ರಾಜಕಾರಣವಾ? ನಾವು ಮುಳ್ಳಿನಿಂದ ಮುಳ್ಳು ತೆಗೆಯುವ ಕೆಲಸ ಮಾಡುತ್ತೇವೆ. ರಾಜಕೀಯ ವ್ಯವಸ್ಥೆಗೆ ಕಾಂಗ್ರೆಸ್ ಮಗ್ಗುಲ ಮುಳ್ಳು. ಮಹಾತ್ಮ ಗಾಂಧೀಜಿ ಕುಟುಂಬ ರಾಜಕೀಯ ಬೇಡ ಎಂದಿದ್ದರು. ಈಗಿನ ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ಹಳೆಯ ಕಾಂಗ್ರೆಸ್ ಕಟ್ಟುವ ಕೆಲಸ ಮಾಡುತ್ತಿತ್ತು. ಈಗಿನ ಕಾಂಗ್ರೆಸ್ ಬೋಳಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಣೆ ಮಾಡಿದೆ. ನರೇಂದ್ರ ಮೋದಿ ರೈತರ ರಕ್ಷಣೆ ಮಾಡುತ್ತಾರೋ ಇಲ್ಲವೊ ಎನ್ನುತ್ತಿದ್ದರು. ಒಂದು ವೇಳೆ ನೆಹರು ಇದ್ದರೆ ಈ ಒಪ್ಪಂದ ಒಪ್ಪಿಕೊಳ್ಳುತ್ತಿದ್ದರೇನೊ? ಆದರೆ ಮೋದಿ ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದರು.

Comments

Leave a Reply

Your email address will not be published. Required fields are marked *