ಬಿಲ್ ಕಟ್ಟಲು ಬ್ಯಾಂಕ್ ಖಾತೆ ಮಾಹಿತಿ ಪಡೆದು ಹೋಟೆಲ್ ಮಾಲೀಕನಿಗೆ ವಂಚನೆ

– ಭದ್ರತಾ ಸಿಬ್ಬಂದಿ ಹೆಸರಲ್ಲಿ ತಿಂಡಿ ಆರ್ಡರ್, ಫೋನ್‍ನಲ್ಲೇ ಪಂಗನಾಮ

ರಾಯಚೂರು: ಬಿಲ್ ಕಟ್ಟಲು ಬ್ಯಾಂಕ್ ಖಾತೆ ಮಾಹಿತಿ ಪಡೆದು ಹೋಟೆಲ್ ಮಾಲೀಕನಿಗೆ ವಂಚಿಸಿದ ಘಟನೆ ಜಿಲ್ಲೆಯ ದೇವಸೂಗುರಿನಲ್ಲಿ ನಡೆದಿದೆ.

ಜಿಲ್ಲೆಯ ದೇವಸೂಗುರಿನ ರವಿತೇಜ್ ಟಿಫಿನ್ ಸೆಂಟರ್‌ಗೆ ಕರೆ ಮಾಡಿದ ಅಪರಿಚಿತರು ಶಕ್ತಿನಗರ ಸಿಐಎಸ್ ಎಫ್‍ನ ಸಿಬ್ಬಂದಿ ಅಂತ ಹೇಳಿಕೊಂಡು ಟಿಫಿನ್ ಆರ್ಡರ್ ಮಾಡಿದ್ದರು. 30 ಜನರಿಗೆ ಟಿಫಿನ್ ಪಾರ್ಸಲ್ ಬೇಕಿದ್ದು, ಸಿದ್ಧ ಮಾಡಲು ಹೋಟೆಲ್ ಮಾಲೀಕ ಸಿದ್ದಲಿಂಗಪ್ಪ ಕೋರಿ ಅವರಿಗೆ ಹೇಳಿ ಬಳಿಕ ಮೋಸಮಾಡಿದ್ದಾರೆ.

ಟಿಫಿನ್ ಸಿದ್ಧವಾದ ಬಳಿಕ ಸಿದ್ದಲಿಂಗಪ್ಪ ಕೋರಿ ಅವರು ಆರೋಪಿಗಳಿಗೆ ಕರೆ ಮಾಡಿದ್ದರು. ಈ ವೇಳೆ ಆರೋಪಿಗಳು, ನಿಮ್ಮ ಬ್ಯಾಂಕ್ ಖಾತೆ ನಂಬರ್ ಕೊಡಿ, ಅದಕ್ಕೆ ಹಣ ಹಾಕುತ್ತೇವೆ. ನಂತರ ನಮ್ಮ ಹುಡುಗನನ್ನು ಕಳಿಸಿಕೊಡುತ್ತೇವೆ. ಅವನ ಕೈಯಲ್ಲಿ ಟಿಫೀನ್ ಕೊಟ್ಟು ಕಳುಹಿಸಿದ ಎಂದು ಹೇಳಿದ್ದರು. ಅವರ ಮಾತನ್ನ ನಂಬಿದ ಹೋಟೆಲ್ ಮಾಲೀಕ ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟಿದ್ದಾರೆ.

ಬ್ಯಾಂಕ್ ಖಾತೆಯ ಜೊತೆಗೆ ಎಟಿಎಂ ಕಾರ್ಡಿನ 14 ಸಂಖ್ಯೆ ಮತ್ತು ಸಿವಿವಿ ನಂಬರ್ ಅನ್ನು ಸಹ ಕೊಡಿ. ಎಟಿಎಂ ಕಾರ್ಡ್ ನ ಎರಡೂ ಸೈಡ್ ಫೋಟೋ ತೆಗೆದು ಹಾಕಿ ಎಂದು ಆರೋಪಿಗಳು ಹೋಟೆಲ್ ಮಾಲೀಕರಿಗೆ ಹೇಳಿದ್ದಾರೆ. ಅದರಂತೆ ಸಿದ್ದಲಿಂಗಪ್ಪ ಫೋಟೋ ಕಳುಹಿಸಿದ್ದಾರೆ ಅಷ್ಟೇ ಅಲ್ಲದೆ ಸ್ವಲ್ಪ ಸಮಯದ ಬಳಿಕ ತಮ್ಮ ಮೊಬೈಲ್‍ಗೆ ಬಂದ ಓಟಿಪಿಯನ್ನ ಹೇಳಿದ್ದಾರೆ. ಈ ಮೂಲಕ ಆರೋಪಿಗಳು 90 ಸಾವಿರ ರೂಪಾಯಿ ಹಣವನ್ನು ದೋಚಿದ್ದಾರೆ.

ಪಾರ್ಸಲ್ ತೆಗೆದುಕೊಂಡು ಹೋಗಲು ಯಾರೂ ಬಾರದ ಹಿನ್ನೆಲೆ ಸಿದ್ದಲಿಂಗಪ್ಪ ಅವರು ಅನುಮಾನ ವ್ಯಕ್ತಪಡಿಸಿ ಬ್ಯಾಂಕ್ ಅಕೌಂಟ್ ಪರಿಶೀಲಿಸಿದ್ದಾರೆ. ಈ ವೇಳೆ ಮೋಸ ಹೋಗಿರುವುದು ಅವರ ಗಮನಕ್ಕೆ ಬಂದಿದೆ. ಹೋಟೆಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ಜಾಹೀರಾತಿನಲ್ಲಿ ಸಿದ್ದಲಿಂಗಪ್ಪ ಅವರ ಮೊಬೈಲ್ ಸಂಖ್ಯೆ ಪಡೆದು ವಂಚಕರು ಮೋಸಮಾಡಿದ್ದಾರೆ. ಹಣ ಕಳೆದುಕೊಂಡಿರುವ ಸಿದ್ದಲಿಂಗಪ್ಪ ರಾಯಚೂರಿನ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *