ಪ್ರಧಾನಿ ಮೋದಿ ದೊಡ್ಡ ಸುಳ್ಳುಗಾರ- ರಾಹುಲ್ ಆರೋಪಕ್ಕೆ ಸಿಡಿದೆದ್ದ ಬಿಜೆಪಿ-ರಾಹುಲ್ ಗಾಂಧಿ ಮಾತಿಗೆ ನಕ್ಕ ಚೌಕಿದಾರ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನೇರವಾಗಿ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಕೇವಲ ಉದ್ಯಮಿಗಳ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಉದ್ಯಮಿಗಳ ಎರಡೂವರೆ ಸಾವಿರ ಕೋಟಿ ರೂ. ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ದೇಶದ ರೈತರು ನಮ್ಮ ಸಾಲವನ್ನು ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದ್ರೆ ಹಣಕಾಸಿನ ಸಚಿವರು ಆಗೋದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ರೆಫೆಲ್ ಡೀಲ್ ಮೂಲಕ ಬಿಜೆಪಿ ಕೋಟಿ ಕೋಟಿ ಹಣವನ್ನು ಮಾಡಿಕೊಂಡಿದೆ ಅಂತಾ ಆರೋಪಿಸಿದರು. ರೆಫೆಲ್ ಡೀಲ್ ಪ್ರಸ್ತಾವನೆ ಮಾಡಿದ್ದಕ್ಕೆ, ಅದು ದೇಶದ ಭದ್ರತಾ ವಿಷಯವಾಗಿದ್ದರಿಂದ ಮಾಹಿತಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದರು.

ಅಮಿತ್ ಶಾ ಪುತ್ರನ ಹೆಸರು ಪ್ರಸ್ತಾವನೆ:
ಮೋದಿ ಸರ್ಕಾರ ಕೇವಲ 15 ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಬೇರೆ ದೇಶಗಳಲ್ಲಿ ಪೆಟ್ರೋಲ್ ಬೆಲೆ ಇಳಿಮುಖವಾಗುತ್ತಿದೆ. ಆದ್ರೆ ನಮ್ಮಲ್ಲಿ ಮಾತ್ರ ದರ ಏರಿಕೆಯಾಗುತ್ತಿದೆ. ಇದೇ ವೇಳೆ ರಾಹುಲ್ ಗಾಂಧಿ ಅಕ್ರಮ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾರ ಹೆಸರನ್ನು ಪ್ರಸ್ತಾಪ ಮಾಡಿದರು. ಜಯ್ ಶಾ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿ, ಗಲಾಟೆ ಮಾಡಲಾರಂಭಿಸಿದರು. ಇದು ನೇರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಕೂಡಲೇ ಮಧ್ಯ ಪ್ರವೇಶಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್, ಅಮಿತ್ ಶಾ ಮತ್ತು ಜಯ್ ಶಾ ಹೆಸರನ್ನು ಕಡತದಿಂದ ತೆಗೆದು ಹಾಕುವಂತೆ ಸೂಚಿಸಿ, ಕಲಾಪ ಸುಗಮ ನಡೆಯುವಂತೆ ನೋಡಿಕೊಂಡರು.

ಅತ್ಯಾಚಾರ ಪ್ರಕರಣಗಳ ಬಗ್ಗೆ ಮೋದಿ ಮೌನ:
ಹಿಂದೂಸ್ತಾನ ಮಹಿಳೆಯರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ಎಡವಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಮಹಿಳೆಯರ ದೌರ್ಜನ್ಯ, ಗ್ಯಾಂಗ್ ರೇಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮೊದಲು ಈ ರೀತಿಯ ಪ್ರಕರಣಗಳು ದೇಶದಲ್ಲಿ ನಡೆದಿರಲಿಲ್ಲ. ಮಹಿಳೆಯರ ರಕ್ಷಣಾ ವಿಚಾರದಲ್ಲಿ ಪ್ರಧಾನಿ ಮೋದಿ ಎಡವಿದ್ದಾರೆ. ದಲಿತ ಮತ್ತು ಆದಿವಾಸಿ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಸತತವಾಗಿ ನಡೆಯುತ್ತಿವೆ. ಬಿಜೆಪಿ ಮಂತ್ರಿಗಳ ಹೆಸರುಗಳು ಅತ್ಯಾಚಾರದಂತಹ ಪ್ರಕರಣದಲ್ಲಿ ಕೇಳಿ ಬರುತ್ತಿವೆ. ಎಲ್ಲದರ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ವಿಚಾರದಲ್ಲಿ ಮಾತ್ರ ಮೌನವಾಗಿದ್ದಾರೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಭಾರತೀಯರು ಅಲ್ಲವೇ ಎಂದು ಪ್ರಶ್ನಿಸಿದರು. ಈ ರೀತಿಯ ಪ್ರಕರಣಗಳು ದೇಶಕ್ಕೆ ಶೋಭೆ ತರುವುದಿಲ್ಲ. ಕೊಲೆಗಡುಕರಿಗೆ ಸಚಿವರೇ ಹಾರ ಹಾಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಮೋದಿಯ ಕೈಕುಲುಕಿದ ರಾಹುಲ್:
ಸಚಿವರಾದ ಅನಂತಕುಮಾರ್ ಹೆಗ್ಗಡೆ ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಾರೆ. ಸ್ವಲ್ಪ ಸಮಯ ಕಲಾಪ ಮುಂದೂಡಿದಾಗ ನಿಮ್ಮ ಸಂಸದರೇ ನನ್ನ ಬಳಿ ಬಂದು ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಅಂತ ಕೈ ಕುಲುಕಿದರು. ಪ್ರಧಾನಿ ಮೋದಿಯವರನ್ನು ಸೋಲಿಸಲು ನಿಮ್ಮ ಪಕ್ಷದಲ್ಲಿಯೇ ಷಡ್ಯಂತ್ರ ರಚಿತವಾಗಿದೆ. ಬಿಜೆಪಿ, ಆರ್‍ಎಸ್‍ಎಸ್ ಗಳಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ನನಗೆ ಹಿಂದೂಸ್ತಾನ್, ಭಾರತ, ಹಿಂದೂ, ನನ್ನ ಧರ್ಮದ ಬಗ್ಗೆ ಹೇಳಿಕೊಟ್ಟಿದ್ದೀರಿ. ನಾನು ಈ ವಿಷಯಕ್ಕಾಗಿ ನಿಮಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳುತ್ತಾ ನೇರವಾಗಿ ಮೋದಿಯವರ ಬಳಿ ತೆರಳಿ ಅಪ್ಪಿಕೊಂಡು ಕೈ ಕುಲುಕಿ ಬರುವ ಮೂಲಕ ಲೋಕಸಭೆಯಲ್ಲಿ ಅಚ್ಚರಿ ಮೂಡಿಸಿದರು.

ರಾಹುಲ್ ಗಾಂಧಿ ಭಾಷಣದ ಉದ್ದಕ್ಕೂ ಬಿಜೆಪಿ ಸಂಸದರು ತೀವ್ರ ಗಲಾಟೆ ನಡೆಸಿದರು. ಈ ಮಧ್ಯೆ ಸ್ಪೀಕರ್ ಸಹ ಅಸಂಸದೀಯ ಪದಗಳನ್ನು ಬಳಸಬಾರದು. ಅನಾವಶ್ಯಕವಾಗಿ ಎಲ್ಲರ ಹೆಸರುಗಳ ಪ್ರಸ್ತಾವನೆ ಮಾಡಬಾರದು. ಒಬ್ಬರ ಮಾತುಗಳನ್ನು ಪೂರ್ಣವಾಗಿ ಕೇಲಿ ಬಳಿಕ ನಿಮ್ಮ ಅಭಿಪ್ರಾಯ ಮಂಡಿಸಿ ಎಂದು ಎಲ್ಲರಿಗೂ ಸೂಚಿಸಿದರು.

Comments

Leave a Reply

Your email address will not be published. Required fields are marked *