ರಾಹುಲ್ ಗಾಂಧಿ ಭಯೋತ್ಪಾದಕರ ದಾಳಿಗೆ ಬಲಿಯಾದ್ರು: ಈಶ್ವರ ಖಂಡ್ರೆ ಎಡವಟ್ಟು

ಹಾವೇರಿ: ಭಯೋತ್ಪಾದಕರ ದಾಳಿಗೆ ರಾಹುಲ್ ಗಾಂಧಿ ಬಲಿಯಾದರು ಎಂದು ಹೇಳುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇಂದು ತಮ್ಮ ಭಾಷಣದ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎನ್ನುವ ಬದಲು ರಾಹುಲ್ ಗಾಂಧಿ ಭಯೋತ್ಪಾದಕರ ದಾಳಿಗೆ ಬಲಿಯಾದರು ಎಂದು ಹೇಳಿದರು. ಕೆಲಹೊತ್ತು ಮುಜುಗುರಕ್ಕೆ ಒಳಗಾದ ಈಶ್ವರ ಖಂಡ್ರೆ ಅವರು, ಕಾಂಗ್ರೆಸ್ ಎಲ್ಲ ವರ್ಗದ ಜನರಿಗೆ ಬದುಕು ಕಟ್ಟಿಕೊಟ್ಟಿದೆ. ನಮ್ಮ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ಸ್ವಾತಂತ್ರ್ಯಕ್ಕಾಗಿ ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಮತವನ್ನು ಯಾವ ಪಕ್ಷಕ್ಕೆ ನೀಡಬೇಕೆಂದು ಜನ ನಿರ್ಧಾರ ಮಾಡಬೇಕು. ಸ್ವಾತಂತ್ರ್ಯ ನಂತರ ದೇಶದ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ನಿಧಾನವಾಗಿ ಎಲ್ಲವನ್ನೂ ಸರಿಪಡಿಸುತ್ತಾ ಬಂದಿದ್ದೇವೆ. ಆದರೆ ಬಿಜೆಪಿಯವರು 55 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಪ್ರಗತಿ ಸಾಧಿಸಲು ಕಾಂಗ್ರೆಸ್ ಶ್ರಮಿಸಿದೆ. ಈ ಯಶಸ್ಸು ಕಾಂಗ್ರೆಸ್‍ಗೆ ಸಲ್ಲಬೇಕು. ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಆಗಿಲ್ಲ. ರೈತರು ಹಾಗೂ ಯುವಕರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ನಾವೇ ಮಾಡಿದ್ದೇವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಅವರ ಮಾತಿಗೆ ನೀವು ಮರುಳಾಗಬೇಡಿ. ಬಿಜೆಪಿಯು ಜನರಿಗೆ ಸುಳ್ಳು ಆಶ್ವಾಸನೆ ನೀಡಿ, ಅಧಿಕಾರಕ್ಕೆ ಬಂದರು. ಆದರೆ ಯಾವುದೇ ಆಶ್ವಾಸನೆ ಈಡೇರಿಸಲಿಲ್ಲ. ಕಾಂಗ್ರೆಸ್ ನೀಡಿದ ಭರವಸೆಯನ್ನು ಈಡೇರಿಸುತ್ತಾ ಬಂದಿದೆ. ಮುಂದೆಯೂ ಹೀಗೆ ನಡೆದುಕೊಳ್ಳುತ್ತೇವೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *