ನನ್ನ ಪರ ನಾಯಿ ಟ್ವೀಟ್ ಮಾಡುತ್ತೆ ಎಂದ ರಾಗಾ – ನಿಮ್ಗಿಂತ ಜಾಣ ಬಿಡಿ ಎಂದ ಬಿಜೆಪಿ!

ನವದೆಹಲಿ: ಇತ್ತೀಚೆಗೆ ಟ್ವಿಟ್ಟರ್‍ನಲ್ಲಿ ರಾಹುಲ್ ಗಾಂಧಿ ಸಕ್ರಿಯವಾಗಿರೋದರ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ತನಗಾಗಿ ನಾಯಿ ಟ್ವೀಟ್ ಮಾಡುತ್ತದೆ ಎಂದು ರಾಹುಲ್ ಗಾಂಧಿ ಟ್ವಿಟ್ಟರ್‍ನಲ್ಲಿ ಪೋಸ್ಟ್ ಹಾಕಿದ್ದು ಇದೀಗ ಟ್ರೆಂಡಿಂಗ್ ಆಗಿದೆ.

ಟ್ವಿಟ್ಟರ್‍ನಲ್ಲಿ ತಮ್ಮ ನಾಯಿ `ಪಿಡಿ’ಯ ವಿಡಿಯೋವೊಂದನ್ನು ರಾಹುಲ್ ಪೋಸ್ಟ್ ಮಾಡಿದ್ದಾರೆ. ರಾಹುಲ್ ಅವರು `ಪಿಡಿ’ ಎಂದು ಕರೆದ ತಕ್ಷಣ ಹುಲ್ಲು ಹಾಸಿನ ಮೇಲೆ ಬಂದು ನಿಲ್ಲುತ್ತದೆ. ಈ ವೇಳೆ ರಾಹುಲ್ ನಮಸ್ಕಾರ ಮಾಡು ಅಂತ ಹೇಳುತ್ತಾರೆ. ಅಂತೆಯೇ ಪಿಡಿ ತನ್ನ ಎರಡು ಮುಂಗಾಲುಗಳನ್ನು ಮೇಲೆತ್ತಿ ನಿಲ್ಲುತ್ತದೆ. ನಂತರ ರಾಹುಲ್ ಬಿಸ್ಕೆಟ್‍ವೊಂದನ್ನು ಅದರ ಮೂಗಿನ ಮೇಲೆ ಇರಿಸುತ್ತಾರೆ. ರಾಹುಲ್ ಚಿಟಿಕೆ ಹೊಡೆದ ಕ್ಷಣಮಾತ್ರದಲ್ಲಿ ನಾಯಿ ತನ್ನ ಬಾಯಿಗೆ ಬಿಸ್ಕತ್ ಎಳೆದುಕೊಳ್ಳುತ್ತದೆ.

ರಾಹುಲ್ ಟ್ವಿಟ್ಟರ್ ಖಾತೆಯನ್ನು ಯಾರು ನಿಭಾಯಿಸುತ್ತಾರೆ ಅನ್ನೋ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ ನಾನೇ..ಪಿಡಿ.. ನಾನು ಆತನಿಗಿಂತ ಬಹಳ ಕೂಲ್. ನೋಡಿ ಟ್ವೀಟ್‍ನಿಂದ ನಾನೇನು ಮಾಡಬಲ್ಲೆ… ಊಪ್ಸ್… ಟ್ರೀಟ್‍ನಿಂದ’ ಎಂದು ರಾಹುಲ್ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಲ್ವಿಯಾ ಟ್ವಿಟ್ಟರ್‍ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಪಿಡಿ ಲಾವೋ, ಕಾಂಗ್ರೆಸ್ ಬಚಾವೋ ಎಂದಿದ್ದಾರೆ. ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರ ಪಾಡ್‍ಮನ್ ನ ಪೋಸ್ಟರ್ ಫೋಟೋಶಾಪ್ ಮಾಡಿ ಪಿಡಿ ಅದರ ಮಾಸ್ಟರ್‍ಗಿಂತಲೂ ಹೆಚ್ಚು ಬುದ್ಧಿ ಹೊಂದಿದೆ ಬರೆದು ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಈವರೆಗೆ ಸುಮಾರು 10 ಸಾವಿರ ಜನ ರಿಟ್ವೀಟ್ ಮಾಡಿದ್ದು, 24 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

ರಾಹುಲ್ ಅವರ ಟ್ವೀಟ್‍ಗೆ ಅಸ್ಸಾಂನ ಬಿಜೆಪಿ ಸಚಿವ ಹಿಮಂತ್ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದಾರೆ. `ನಾವು ಅಸ್ಸಾಂನ ಗಂಭೀರ ವಿಷಯಗಳ ಬಗ್ಗೆ ಚರ್ಚಿ ನಡೆಸಲು ಬಂದಾಗಲೂ ನೀವು ನಾಯಿಗೆ ಬಿಸ್ಕೆಟ್ ತಿನ್ನಿಸುತ್ತಿದ್ದುದು ನೆನಪಿದೆ’ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಾಗಿದ್ದ ಶರ್ಮಾ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು.

Comments

Leave a Reply

Your email address will not be published. Required fields are marked *