ನಾವು ಜಾತಿ ಸಮೀಕ್ಷೆ ನಡೆಸುತ್ತೇವೆ, ಅವಕಾಶ ವಂಚಿತರಿಗೆ ಇದರಿಂದ ಲಾಭವಾಗಲಿದೆ: ರಾಹುಲ್ ಗಾಂಧಿ

ಮುಂಬೈ: ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿಯ ಮೇಲಿನ 50% ಮಿತಿಯನ್ನು ತೆಗೆದುಹಾಕಿ, ರಾಷ್ಟ್ರವ್ಯಾಪಿ ಜಾತಿ ಜನಗಣತಿಯನ್ನು (Caste Census) ನಡೆಸುತ್ತೇವೆ. ಇದರಿಂದ ಅವಕಾಶ ವಂಚಿತರಿಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ಮೀಸಲಾತಿಯ ಮೇಲಿನ 50% ಮಿತಿಯನ್ನು ತೆಗೆದು ಹಾಕುವುದು ಹಾಗೂ ಜಾತಿ ಜನಗಣತಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ಕೇಂದ್ರ ಸ್ತಂಭ ಎಂದು ಹೇಳಿಕೊಂಡಿದ್ದಾರೆ.

ನ.20ರ ಮಹಾರಾಷ್ಟ್ರ (Maharashtra) ವಿಧಾನಸಭಾ ಚುನಾವಣೆ ಕೋಟ್ಯಾಧಿಪತಿಗಳು ಮತ್ತು ಬಡವರ ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ. ಬಿಜೆಪಿಯು ಫಾಕ್ಸ್‌ಕಾನ್ ಮತ್ತು ಏರ್‌ಬಸ್ ಸೇರಿದಂತೆ 7 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್‌ಗೆ ವರ್ಗಾಯಿಸಿದೆ. ಈ ಮೂಲಕ ರಾಜ್ಯದ ಯುವಕರನ್ನು ಉದ್ಯೋಗ ವಂಚಿತರನ್ನಾಗಿಸಿದೆ ಎಂದು ಆರೋಪಿಸಿದ್ದಾರೆ.

ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಉದ್ಯಮಿ ಗೌತಮ್ ಅದಾನಿಗೆ ಅನುಕೂಲವಾಗುವಂತೆ ಬಿಜೆಪಿ ವಿನ್ಯಾಸಗೊಳಿಸಿದೆ. ನರೇಂದ್ರ ಮೋದಿ ಸರ್ಕಾರ ಅದಾನಿ ಪರವಾಗಿ ಕೆಲಸ ಮಾಡುತ್ತಿದೆ. ಅವರಿಗಾಗಿ ಯಾವುದೇ ಸಹಾಯ ಮಾಡಲು ಸಿದ್ಧವಾಗಿದೆ. ಹೀಗಾಗಿ ವಿಮಾನ ನಿಲ್ದಾಣ, ಬಂದರು ಸೇರಿದಂತೆ ಎಲ್ಲ ಪ್ರಮುಖ ಪ್ರಾಜೆಕ್ಟ್‌ಗಳ ಟೆಂಡರ್ ಅವರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

“ಏಕ್ ಹೈ ತೋ ಸೇಫ್ ಹೈ” ಎಂಬ ಬಿಜೆಪಿಯ ಘೋಷಣೆಯನ್ನು ಲೇವಡಿ ಮಾಡಿದ ಅವರು, ಮಹಾರಾಷ್ಟ್ರದ ಹಿತಾಸಕ್ತಿಗಳಿಗಿಂತ ಅದಾನಿ ಅವರ ಹಿತಾಸಕ್ತಿಗಳನ್ನು ಪಕ್ಷವು ರಕ್ಷಿಸುತ್ತಿದೆ. ಮಹಾ ವಿಕಾಸ್ ಅಘಾಡಿಯು ಜನರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.