ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

ನವದೆಹಲಿ: ಯುದ್ಧ ಭೂಮಿ ಉಕ್ರೇನ್‌ನ ಬಂಕರ್‌ಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತುರ್ತಾಗಿ ಅಲ್ಲಿಂದ ಸ್ಥಳಾಂತರಿಸಲು ಕ್ರಮವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ.

ರಷ್ಯಾ ಯುದ್ಧ ಘೋಷಣೆಯಿಂದಾಗಿ ಉಕ್ರೇನ್‌ನ ಬಂಕ್‌ಗಳಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

ಬಂಕರ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಾಣ ಭೀತಿಯ ದೃಶ್ಯಗಳು ಆತಂಕಕಾರಿಯಾಗಿವೆ. ಭಾರೀ ದಾಳಿಗೆ ಒಳಗಾಗಿರುವ ಪೂರ್ವ ಉಕ್ರೇನ್‌ನಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವವರ ಕುಟುಂಬದ ಸದಸ್ಯರ ಆತಂಕದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಎಲ್ಲರ ತುರ್ತು ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಮನವಿ ಮಾಡಿದ್ದಾರೆ.

https://twitter.com/RahulGandhi/status/1497417864155832320

ಬೆಂಗಳೂರಿನ ಮೇಘಾ ಎಂಬ ವಿದ್ಯಾರ್ಥಿನಿ ವೀಡಿಯೋವೊಂದನ್ನು ಶೇರ್‌ ಮಾಡಿದ್ದರು. ಭಾರತದ ನಾನಾ ಭಾಗಗಳ ಪ್ರಜೆಗಳು ಉಕ್ರೇನ್‌ನ ಬಂಕರ್‌ನಲ್ಲಿ ಸಿಲುಕಿದ್ದೇವೆ. ತಿನ್ನಲು ಅನ್ನವಿಲ್ಲ, ಕುಡಿಯಲು ನೀರಿಲ್ಲ. ನಮಗೆ ಸಹಾಯ ಬೇಕಾಗಿದೆ. ಸಹಾಯ ಮಾಡಲು ಯಾರೂ ಮುಂದಾಗುತ್ತಿಲ್ಲ. ನಮ್ಮನ್ನು ಕರೆದೊಯ್ಯಲು ಯಾವುದೇ ವಿಶೇಷ ವಿಮಾನ ಇಲ್ಲ. ಬಂಕರ್‌ಗಳಲ್ಲಿ ಇರುವುದು ತುಂಬಾ ಕಷ್ಟಕರವಾಗಿದೆ. ದಯಮಾಡಿ ನಮಗೆ ಸಹಾಯ ಒದಗಿಸಿ ಎಂದು ಅಂಗಲಾಚುತ್ತಿರುವ ವೀಡಿಯೋವನ್ನು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಭಾರತದ ಸಾವಿರಾರು ಮಂದಿ ಸಿಲುಕಿಕೊಂಡಿದ್ದಾರೆ. 15,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನು ಕರೆತರಲು ಏರ್‌ ಇಂಡಿಯಾ ಕಾರ್ಯಾಚರಣೆ ನಡೆಸುತ್ತಿದೆ. ನಾವು ತಿಳಿಸುವವರೆಗೂ ಯಾರು ಕೂಡ ದೇಶದ ಗಡಿ ಭಾಗಗಳಿಗೆ ಹೋಗಬೇಡಿ. ನೀವಿರುವ ಸ್ಥಳದಲ್ಲೇ ಇರಿ ಎಂದು ಭಾರತದ ರಾಯಭಾರಿ ಕಚೇರಿ ಸೂಚನೆ ನೀಡಿದೆ.

Comments

Leave a Reply

Your email address will not be published. Required fields are marked *