ಶೃಂಗೇರಿ ಮಠದಲ್ಲಿ ಪಂಚೆ-ಶಲ್ಯದಲ್ಲಿ ದರ್ಶನ ಪಡೆದ ರಾಹುಲ್ – ಕಾಂಗ್ರೆಸ್ ಅಧ್ಯಕ್ಷರಿಗೆ ಹಳೆಯದನ್ನ ನೆನಪಿಸಿದ ಭಾರತೀತೀರ್ಥ ಶ್ರೀ

ಚಿಕ್ಕಮಗಳೂರು: ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.

ಚಿಕ್ಕಮಗಳೂರಿನ ಶೃಂಗೇರಿ ಮಠಕ್ಕೆ ಭೇಟಿ ನೀಡಿದ ರಾಹುಲ್ ಅವರು ಮಠದ ಭಾರತೀತೀರ್ಥ ಸ್ವಾಮೀಜಿ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಹುಲ್ ಸ್ವಾಮೀಜಿ ಅವರನ್ನು ಭೇಟಿ ಮಡುವ ಸಂದರ್ಭದಲ್ಲಿ ಉಳಿದ ಕಾಂಗ್ರೆಸ್ ನಾಯಕರನ್ನು ಹೊರಗೆ ಕಳುಹಿಸಿದ್ದು, ಈ ವೇಳೆ ರಾಹುಲ್ ಗೆ ಶ್ರೀಗಳು ಆಶೀರ್ವಚನ ನೀಡಿದ್ದಾರೆ.

ಇದೇ ವೇಳೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಭೇಟಿಯ ಬಗ್ಗೆ ಶ್ರೀಗಳು ಮೆಲುಕು ಹಾಕಿದ್ರು. 1975ರಲ್ಲಿ ಅಜ್ಜಿ ಇಂದಿರಾ ಗಾಂಧಿ ಭೇಟಿ ನೀಡಿದ್ದರ ಬಗ್ಗೆ ಶ್ರೀಗಳು ರಾಹುಲ್‍ಗೆ ಮಾಹಿತಿ ನೀಡಿದ್ರು. ಅಲ್ಲದೇ ಇಂದಿರಾ ಗಾಂಧಿ ತಮ್ಮ ಭೇಟಿ ವೇಳೆ ಆಡಿದ್ದ ಮಾತುಗಳ ಬಗ್ಗೆ ಉಲ್ಲೇಖಿಸಿದರು ಎನ್ನಲಾಗಿದೆ.


ಬಳಿಕ ಯಾವುದರ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಶ್ರೀಗಳು ಧರ್ಮಬೋಧನೆ ಮಾಡಿದ್ರು. ನಿಮಗೆ ಉಜ್ವಲ ಭವಿಷ್ಯ ಇದೆ. ಆದರೆ ಅದಕ್ಕೆ ಇನ್ನಷ್ಟು ಕಷ್ಟಪಡಬೇಕು. ಹಿಂದೂ ಧರ್ಮದ ರಕ್ಷಣೆಗೆ ಸದಾ ಕಟಿಬದ್ಧರಾಗಿರಿ. ಯಾವುದೇ ರೀತಿಯಲ್ಲೂ ಧರ್ಮ ವಿರೋಧಿ ಕೆಲಸಕ್ಕೆ ಅವಕಾಶ ನೀಡಬೇಡಿ. ನಿಮಗೆ ಒಳ್ಳೆದಾಗಲಿ, ನಿಮ್ಮ ಸಕಲ ಇಷ್ಟಾರ್ಥ ಸಿದ್ಧಿಸಲಿ ಅಂತ ರಾಹುಲ್ ಗಾಂಧಿ ಶಿರದ ಮೇಲೆ ಕೈ ಇಟ್ಟು ಭಾರತೀತೀರ್ಥ ಸ್ವಾಮೀಜಿ ಹರಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ನಂತರ ಸ್ವಾಮೀಜಿಯವರು ರಾಹುಲ್ ಅವರಿಗೆ ಶಾಲು ಹೊದಿಸಿ, ಫಲ-ತಾಂಬೂಲ ಕೊಟ್ಟು ಆಶೀರ್ವಾದ ನೀಡಿದ್ದಾರೆ.

Comments

Leave a Reply

Your email address will not be published. Required fields are marked *