ರಾಹುಲ್ ಗಾಂಧಿ ಲಖೀಂಪುರ್ ಭೇಟಿಗೆ ಅವಕಾಶವಿಲ್ಲವೆಂದ ಯೋಗಿ ಸರ್ಕಾರ

ಲಕ್ನೋ: ಉತ್ತರಪ್ರದೇಶದಲ್ಲಿ ಕೇಂದ್ರ ಸಚಿವರ ಮಗ ಕಾರು ಹತ್ತಿಸಿ ನಾಲ್ವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಲು ನಿರ್ಧರಿಸಿತ್ತು. ಆದರೆ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸಿ ಭೇಟಿಗೆ ಅವಕಾಶವಿಲ್ಲ ಎಂದಿದೆ.

ಉತ್ತರ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 144 ಸೆಕ್ಷನ್ ಜಾರಿ ಮಾಡಿದೆ. ಇದಲ್ಲದೆ ಕಾಂಗ್ರೆಸ್ ಪಕ್ಷ, ಬಿಜೆಪಿ ನೇತೃತ್ವದ ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂದು ರಾಹುಲ್ ಸಹಿತ ಕಾಂಗ್ರೆಸ್ ನಿಯೋಗ ಭೇಟಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಉತ್ತರ ಪ್ರದೇಶ ಸರ್ಕಾರ ಅವಕಾಶ ನಿರಾಕರಿಸಿದೆ. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

ಈ ಮೊದಲು ಲಖೀಂಪುರ್ ಖೇರಿ ಭೇಟಿಗೆ ಮುಂದಾದ ಪ್ರಿಯಾಂಕಾ ಗಾಂಧಿ ಅವರನ್ನು ಯೋಗಿ ಸರ್ಕಾರ 2 ದಿನ ಗೃಹ ಬಂಧನದಲ್ಲಿಟ್ಟಿದ್ದು, ಪ್ರಿಯಾಂಕಾ ವಿರುದ್ಧ ಎಫ್‍ಐಆರ್ ದಾಖಲಿಸಿದೆ. ಆದರೆ ಪ್ರಿಯಾಂಕಾ ಗೃಹ ಬಂಧನದಲ್ಲಿಟ್ಟಿರುವ ಪೊಲೀಸರ ಕ್ರಮದ ಬಗ್ಗೆ ಖಂಡನೆ ವ್ಯಕ್ತವಾಗಿದೆ. ಸ್ವತಃ ಪ್ರಿಯಾಂಕಾ ಗಾಂಧಿ ಟ್ವಿಟ್ಟರ್ ಮೂಲಕ ವೀಡಿಯೋ ಒಂದನ್ನು ಹರಿಬಿಟ್ಟಿದ್ದಾರೆ. ಇದೀಗ ಸೀತಾಪುರದಲ್ಲಿ ಇಂಟರ್‍ ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

 

Comments

Leave a Reply

Your email address will not be published. Required fields are marked *