ಬಸವಣ್ಣನ ವಚನಗಳ ಪುಸ್ತಕ ಓದುವಂತೆ ಪ್ರಧಾನಿಗೆ ರಾಹುಲ್ ಗಾಂಧಿ ಸಲಹೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಸವಣ್ಣನ ವಚನವನ್ನು ಭಾಷಣದುದ್ದಕ್ಕೂ ಉಲ್ಲೇಖಿಸುತ್ತಾ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರಿಗೆ ಕುಟುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಸವಣ್ಣನ ವಚನಗಳ ಪುಸ್ತಕ ಓದಬೇಕು. ಅದನ್ನು ಮೈಗೂಡಿಸಿಕೊಳ್ಳಬೇಕು. ಭ್ರಷ್ಟಾಚಾರ ರಹಿತ ಅಂತ ಭಾಷಣ ಮಾಡುವ ಮೋದಿ, ರೆಡ್ಡಿ ಬ್ರದರ್ಸ್ ಗೆ 8 ಟಿಕೆಟ್ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನಾರ್ದನ ರೆಡ್ಡಿ, ಯಡಿಯೂರಪ್ಪ, ಜೈಲಿಗೆ ಹೋದವರು. ಎಲ್ಲಾಕಡೆ ಭ್ರಷ್ಟಾಚಾರ ವಿರೋಧಿಯಂತೆ ಮೋದಿ ಮಾತನಾಡುತ್ತಾರೆ. ಪ್ರಧಾನಿ ಮೋದಿ ಜೈಲಿಗೆ ಹೋದವರ ಜೊತೆ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸೆಂಟ್ರಲ್ ಬ್ಯೂರೋ ಆಫ್ ಇಲ್ಲಿಗಲ್ ಮೈನಿಂಗ್ ಅಂತ ಸಿಬಿಐಯನ್ನು ಬಣ್ಣಿಸಿದರು.

ರೆಡ್ಡಿ ಬ್ರದರ್ಸ್ ಇಡೀ ಕರ್ನಾಟಕವನ್ನು ಲೂಟಿ ಮಾಡಿದ್ದಾರೆ. ದೇಶದ ರೈತರಿಗೆ ಯುಪಿಎ ಸರ್ಕಾರ ಕೊಟ್ಟ ಹಣದ ಮೊತ್ತದಷ್ಟನ್ನು ರೆಡ್ಡಿ ಗ್ಯಾಂಗ್ ಲೂಟಿ ಮಾಡಿದೆ. ದೇಶದಲ್ಲಿ ಎಲ್ ಪಿ ಜಿ, ಪೆಟ್ರೋಲ್ ಲೂಟಿಯಾಗುತ್ತಿದೆ. ಲೂಟಿ ಮಾಡಿದ ಹಣ ಮೋದಿ ಆಪ್ತರ ಕಿಸೆಗೆ ಹೋಗುತ್ತದೆ ಎಂದು ಆರೋಪಿಸಿದರು.

ಮೋದಿ ಭೇಟಿ ಬಚಾವೋ ಭೇಟಿ ಪಡಾವೋ ಅಂತಾರೆ. ಬಿಜೆಪಿ ನಾಯಕರಿಂದಲೇ ಭೇಟಿ ಬಚಾವ್ ಮಾಡಬೇಕಾಗಿದೆ. ಅತ್ಯಾಚಾರ ನಡೆದರೂ ಮೋದಿ ತುಟಿ ಬಿಚ್ಚುವುದಿಲ್ಲ. ಡೋಕ್ಲಾಂ ನಲ್ಲಿ ಚೀನ ಅಟ್ಟಹಾಸ ಮಾಡುತ್ತಿದೆ. ನಮ್ಮ ಪ್ರಧಾನಿ ಚೀನಾ ಪ್ರವಾಸ ಮಾಡಿ ಅಲ್ಲಿನ ಪ್ರಧಾನಿ ಜೊತೆ ಜೋಕಾಲಿ ಆಡ್ತಾರೆ ಅಂತ ಕಟುವಾಗಿ ಟೀಕಿಸಿದರು.

Comments

Leave a Reply

Your email address will not be published. Required fields are marked *