ಬಿಜೆಪಿ ಮಿತ್ರರೇ, ನರೇಂದ್ರಭಾಯ್ ಥರ ನಾನೂ ಮನುಷ್ಯನೇ: ರಾಹುಲ್ ಗಾಂಧಿ

ನವದೆಹಲಿ: ಇತ್ತೀಚೆಗೆ ಟ್ವಿಟ್ಟರ್‍ನಲ್ಲಿ ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿ ಹಾಕಿದ್ದ ಪೋಸ್ಟ್‍ನಲ್ಲಿ ತಪ್ಪಾಗಿದ್ದ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಆದ್ರೆ ಕ್ಷಮೆ ಕೇಳುವ ವೇಳೆಯೂ ಮೋದಿಗೆ ರಾಹುಲ್ ಟಾಂಗ್ ಕೊಟ್ಟಿದ್ದಾರೆ.

ನನ್ನ ಎಲ್ಲಾ ಬಿಜೆಪಿ ಮಿತ್ರರಿಗೆ: ನರೇಂದ್ರ ಭಾಯ್‍ರಂತೆ ನಾನೂ ಮನುಷ್ಯನೇ. ನಾವು ತಪ್ಪುಗಳನ್ನ ಮಾಡುತ್ತೇವೆ. ಅದನ್ನ ಬೊಟ್ಟು ಮಾಡಿ ತೋರಿಸಿದ್ದಕ್ಕೆ ಧನ್ಯವಾದ. ಇದೇ ರೀತಿ ಮುಂದುವರೆಯಲಿ. ನಾನು ಇಂಪ್ರೂವ್ ಆಗಲು ಇದು ಸಹಾಯ ಮಾಡುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಗುಜರಾತ್‍ನಲ್ಲಿ ಬೆಲೆ ಏರಿಕೆಯಿಂದ ಜೀವನ ದುಸ್ತರವಾಗಿದೆ. ಬಿಜೆಪಿ ಕೇವಲ ಶ್ರೀಮಂತರ ಸರ್ಕಾರನಾ? ಎಂದು ಪ್ರಶ್ನಿಸಿ ರಾಹುಲ್ ಗಾಂಧಿ ಪೋಸ್ಟ್‍ವೊಂದನ್ನ ಹಾಕಿದ್ದರು. ಇದರಲ್ಲಿ 2014ರಲ್ಲಿ ಇದ್ದ ವಸ್ತುಗಳ ಬೆಲೆ ಹಾಗೂ ಪ್ರಸ್ತುತ ಇರುವ ಬೆಲೆಯನ್ನು ನೀಡಲಾಗಿತ್ತು. ಆದ್ರೆ ಬೆಲೆ ಏರಿಕೆಯ ಶೇಖಡವಾರು ಪ್ರಮಾಣ ನಮೂದಿಸಿದ್ದ ಪಟ್ಟಿ ತಪ್ಪಾಗಿತ್ತು. ಉದಾಹರಣೆಗೆ 2014ರಲ್ಲಿ 40 ರೂ. ಇದ್ದ ಈರುಳ್ಳಿ 2017ರಲ್ಲಿ 80 ಕೆಜಿ ಆಗಿದೆ. ಶೇ.200ರಷ್ಟು ಏರಿಕೆಯಾಗಿದೆ ಎಂದು ಆ ಪೋಸ್ಟ್ ನಲ್ಲಿ ನಮೂದಿಸಲಾಗಿತ್ತು.

ಈ ತಪ್ಪನ್ನ ಟ್ವಿಟ್ಟರಿಗರು ಗುರುತಿಸಿದ ನಂತರ ಆ ಟ್ವೀಟ್ ಡಿಲೀಟ್ ಮಾಡಿ ಹೊಸದಾದ ಪೋಸ್ಟ್ ಹಾಕಿದ್ದರು. ಹೊಸ ಪೋಸ್ಟ್‍ನಲ್ಲಿ ಶೇಖಡವಾರು ಏರಿಕೆ ಬದಲಾಗಿ ನಿರ್ದಿಷ್ಟವಾಗಿ ಎಷ್ಟು ರೂ. ಏರಿಕೆಯಾಗಿದೆ ಎಂಬುದನ್ನ ಬರೆದಿದ್ದರು. ಆದ್ರೆ ಮೊದಲ ಪೋಸ್ಟ್‍ಗೆ ಬಿಜೆಪಿ ರಾಹುಲ್ ಗಾಂಧಿಯನ್ನ ಪ್ರಶ್ನಿಸಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಧಾನ ಮಂತ್ರಿ ಸಚಿವಾಲಯದ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್, ಇವರ ಪ್ರಶ್ನೆಗಳೇ ಗೊಂದಲಮಯವಾಗಿವೆ. ಇವರಿಗೆ ಯಾರು ಪ್ರಶ್ನೆಗಳನ್ನ ಹಾಕಿ ಕೊಡ್ತಾರೋ ಗೊತ್ತಿಲ್ಲ. ಬಹುಶಃ ಅವರಿಗೆ ಮಾಹಿತಿಯೇ ಅರ್ಥವಾಗಿಲ್ಲ ಅಥವಾ ಅವರ ಅನುಕೂಲಕ್ಕೆ ತಕ್ಕಂತೆ ತಪ್ಪಾಗಿ ತೋರಿಸುತ್ತಿದ್ದಾರೆ. ಈ ಎಲ್ಲಾ ಮಾಹಿತಿ ಆಧಾರರಹಿತ ಎಂದು ಹೇಳಿದ್ದರು.

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೋಮವಾರದಂದು ವ್ಯಂಗ್ಯವಾಗಿ ಹೇಳಿಕೆ ನೀಡಿದ್ದರು. ತಮ್ಮ ‘ಔರಂಗಜೇಬ್ ರಾಜ’ನಿಗಾಗಿ ನಾನು ಕಾಂಗ್ರೆಸ್‍ಗೆ ಅಭಿನಂದಿಸುತ್ತೇನೆ. ನಮಗೆ ಜನರು ಚೆನ್ನಾಗಿರುವುದು ಮುಖ್ಯ. 125 ಕೋಟಿ ಭಾರತೀಯರೇ ನಮಗೆ ಹೈಕಮಾಂಡ್ ಎಂದು ಮೋದಿ ಹೇಳಿದ್ದರು.

Comments

Leave a Reply

Your email address will not be published. Required fields are marked *