ಕನ್ನಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ದ್ರಾವಿಡ್

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ನಟ ರಮೇಶ್ ಅರವಿಂದ್ ನಟಿಸಿರುವ ಶಿವಾಜಿ ಸುರತ್ಕಲ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗಾಗಿ ಚಿತ್ರ ತಂಡ ಮಲ್ಲೇಶ್ವರದ ಎಸ್‍ಆರ್ ವಿ ಚಿತ್ರ ಮಂದಿರದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಚಿತ್ರ ತಂಡದ ಕರೆಗೆ ಓಗೊಟ್ಟು ಬಿಡುವು ಮಾಡಿಕೊಂಡು ದ್ರಾವಿಡ್ ಸಿನಿಮಾ ವೀಕ್ಷಿಸಿದ್ದಾರೆ. ಅಲ್ಲದೆ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡು ಸಿನಿಮಾ ನೋಡುವ ಮೂಲಕ ದ್ರಾವಿಡ್ ಶಿವಾಜಿ ಸುರತ್ಕಲ್ ಚಿತ್ರದ ಮೊದಲ ಪ್ರೇಕ್ಷಕರಾದರು. ಸಿನಿಮಾ ವೀಕ್ಷಣೆ ನಂತರ, ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತು ರಮೇಶ್ ಅರವಿಂದ್ ಬಳಿ ಅಭಿಪ್ರಾಯ ಹಂಚಿಕೊಂಡ ದ್ರಾವಿಡ್, ಚಿತ್ರ ಅದ್ಭುತವಾಗಿದೆ, ಕ್ಲೈಮ್ಯಾಕ್ಸ್ ನನ್ನನ್ನು ಬೆರಗುಗೊಳಿಸಿತು. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಈ ಕ್ಲೈಮ್ಯಾಕ್ಸ್ ನಿಂದ ಆಶ್ಚರ್ಯವಾಗುವುದು ಖಚಿತ. ಸಿನಿಮಾ ತುಂಬಾ ವಿಭಿನ್ನವಾಗಿ ಮೂಡಿ ಬಂದಿದ್ದು, ಖಂಡಿತ ಯಶಸ್ವಿಯಾಗಲಿದೆ ಎಂದರು.

ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಗಡ್ಡ ಬಿಟ್ಟುಕೊಂಡು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಫೆಬ್ರವರಿ 21ರಂದು ‘ಶಿವಾಜಿ ಸುರತ್ಕಲ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಈ ಚಿತ್ರದಲ್ಲಿ ರಮೇಶ್ ತನಿಖಾಧಿಕಾರಿ ಪಾತ್ರ ಮಾಡಿದ್ದು, ಅವರ ಪತ್ನಿ ಪಾತ್ರದಲ್ಲಿ ನಟಿ ರಾಧಿಕಾ ನಾರಾಯಣ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ನಟಿ ಆರೋಹಿ ನಾರಾಯಣ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರಿಗೆ ವೈದ್ಯೆ ಪಾತ್ರ ನೀಡಲಾಗಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಎರಡನೇ ಸಿನಿಮಾ ಇದಾಗಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಚಿತ್ರದ ಪೋಸ್ಟರ್ ಗಳು ಹಾಗೂ ಟೀಸರ್, ಟ್ರೇಲರ್ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿರುವ ಎ ಕೇಸ್ ಆಫ್ ರಣಗಿರಿ ರಹಸ್ಯ ಟ್ಯಾಗ್‍ಲೈನ್‍ನ ಶಿವಾಜಿ ಸುರತ್ಕಲ್ ಪ್ರೇಕ್ಷರನ್ನು ಮೋಡಿ ಮಾಡಲು ಬರುತ್ತಿದೆ.

Comments

Leave a Reply

Your email address will not be published. Required fields are marked *