ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚಿ ಅಪ್ಪ-ಅಮ್ಮನ ಮದ್ವೆ ವಾರ್ಷಿಕೋತ್ಸವ ಆಚರಿಸಿದ ರಾಗಿಣಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಆದ್ರೆ ಇದೀಗ ತಮ್ಮ ಅಪ್ಪ-ಅಮ್ಮ ಮದುವೆ ವಾರ್ಷಿಕೋತ್ಸವದ ವಿಶೇಷ ದಿನವನ್ನು ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿಯನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಗಿಣಿ ತಮ್ಮ ತಂಡದೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ 300ಕ್ಕೂ ಹೆಚ್ಚು ಸಿಬ್ಬಂದಿಗೆ ಆಹಾರ ಹಂಚಿದ್ದಾರೆ. ಈ ಮೂಲಕ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಆಚರಿಸಿ, ಹೆತ್ತವರಿಗೆ ಒಂದೊಳ್ಳೆ ಉಡುಗೊರೆ ನೀಡಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ರಾಗಿಣಿ, ಆರ್‌ಡಿ ವೆಲ್‍ಫೇರ್ ವತಿಯಿಂದ 300ಕ್ಕೂ ಹೆಚ್ಚು ಮಂದಿ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರಿಯರ್ಸ್‍ಗೆ ಊಟ, ಸಿಹಿ ಹಂಚಿದ್ದೇವೆ. ನಮಗೆ ಹೀಗೆ ಬೆಂಬಲ ನೀಡುತ್ತಿರಿ ಎಂದು ಬರೆದು ಊಟ ನೀಡುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

https://twitter.com/raginidwivedi24/status/1258067253234298880

ಕಳೆದ ಕೆಲವು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ 150 ವೈದ್ಯಕೀಯ ಸಿಬ್ಬಂಧಿಗಳಿಗೆ ಮನೆಯಲ್ಲಿ ಅಡುಗೆ ತಯಾರಿಸಿ ಕಳುಹಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಆರ್‌ಡಿ(ರಾಗಿಣಿ ದ್ವಿವೇದಿ) ಫೌಂಡೇಶನ್ ವತಿಯಿಂದ ರಾಗಿಣಿ ಅವರು ಸಿನಿಮಾ ರಂಗದ ಕೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವು ನೀಡಿದ್ದರು. ಹಾಗೆಯೇ ನೂರು ಡ್ಯಾನ್ಸರ್ಸ್, 40 ಸ್ಲಮ್ ಏರಿಯಾಗಳಲ್ಲಿರುವ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡಿದ್ದರು. ಮಾಜಿ ಮೇಯರ್ ಪದ್ಮಾವತಿ ಜೊತೆ ಸೇರಿ ಅನ್ನದಾಸೋಹ ಮತ್ತು ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಹ ವಿತರಣೆ ಮಾಡಿದ್ದರು.

ರಾಗಿಣಿ ಅವರು ಲಾಕ್‍ಡೌನ್ ಸಂಕಷ್ಟದಲ್ಲಿ ಬಡವರು, ಸಿನಿಮಾ ರಂಗದ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವುದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಗಿಣಿ ಅವರು ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿರುವುದು ಎಲ್ಲರ ಮನಗೆದ್ದಿದೆ.

Comments

Leave a Reply

Your email address will not be published. Required fields are marked *