ಮಾರಕಾಸ್ತ್ರಗಳಿಂದ ಹಲ್ಲೆಗೈದು ರೆಡ್ ಎಫ್‍ಎಂನ ಫೇಮಸ್ ಆರ್ ಜೆಯ ಬರ್ಬರ ಹತ್ಯೆ

ತಿರುವನಂತಪುರಂ: ಪ್ರಸಿದ್ಧ ರೇಡಿಯೋ ಜಾಕಿಯೊಬ್ಬರನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಈ ಘಟನೆ ಮಂಗಳವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ. ಮೃತ ದುರ್ದೈವಿಯನ್ನು 36 ವರ್ಷದ ರಾಜೇಶ್ ಅಲಿಯಾಸ್ ರಸಿಕನ್ ರಾಜೇಶ್ ಎಂಬುದಾಗಿ ಗುರುತಿಸಲಾಗಿದೆ. ಇವರು ಕೇವಲ ರೇಡಿಯೋ ಜಾಕಿಯಾಗಿರದೇ ಮಿಮಿಕ್ರಿ ಅರ್ಟಿಸ್ಟ್, ಜಾನಪದ ಹಾಡುಗಾರನೂ ಕೂಡ ಆಗಿದ್ದರು.

ಏನಿದು ಘಟನೆ?: ಪಲ್ಲಕಿಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಡವೂರ್ ಎಂಬಲ್ಲಿ ರಾಜೇಶ್ ಮೆಟರೋ ಸ್ಟುಡಿಯೋ ಅಂತ ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋವೊಂದನ್ನು ಹೊಂದಿದ್ದರು. ಸೋಮವಾರ ರಾತ್ರಿ ಸ್ಟೇಜ್ ಪ್ರೋಗ್ರಾಂ ಒಂದನ್ನು ಮುಗಿಸಿ, ಉಪಕರಣಗಳೊಂದಿಗೆ ತನ್ನ ಗೆಳೆಯ ಕುಟ್ಟನ್ ಜೊತೆ ರಾಜೇಶ್ ಸ್ಟುಡಿಯೋಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಯಾರು ಗದ್ದಲ ಮಾಡದಂತೆ ಪೊಲೀಸರು ಸ್ಥಳೀಯರಿಗೆ ಸೂಚಿಸಿದ್ದಾರೆ.

ಪರಿಪ್ಪಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ರಾಜೇಶ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗೆಳೆಯ ಕುಟ್ಟನ್ ಅವರಿಗೆ ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದ್ರೆ ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ ಎಂಬುದಾಗಿ ವರದಿಯಾಗಿದೆ.

ರಾಜೇಶ್ ಅವರು ದೋಹಾದಲ್ಲಿ ವಾಯ್ಸ್ ಆಫ್ ಕೇರಳ ರೆಡ್ ಎಫ್‍ಎಂ ನಲ್ಲಿ ಸೇರುವ ಮುನ್ನವೇ ರೆಡ್ ಎಫ್‍ಎಂ ನಲ್ಲಿ ಹಲವು ವರ್ಷಗಳ ಕಾಲ ಆರ್ ಜೆ ಆಗಿ ಕಾರ್ಯನಿರ್ವಹಿಸಿದ್ದರು. ವಿದೇಶದಿಂದ ಇತ್ತೀಚೆಗಷ್ಟೇ ಬಂದಿದ್ದ ಅವರು ಮಿಮಿಕ್ರಿ ತಂಡವೊಂದರಲ್ಲಿ ಸೇರಿಕೊಂಡಿದ್ದರು. ಇದೀಗ ರಾಜೇಶ್ ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ.

Comments

Leave a Reply

Your email address will not be published. Required fields are marked *