ಇಬ್ಬರು ಮಕ್ಕಳು ನನ್ನ ಥರನೇ – ಈಗ ನಮ್ಮ ಕನಸು ನನಸಾಗಿದೆ ಎಂದ ಯಶ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದರು. ಅಂದಿನಿಂದ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ರಾಧಿಕಾ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಗನ ಆಗಮನದಿಂದ ದಂಪತಿ ಇಬ್ಬರೂ ತುಂಬಾ ಸಂತಸದಿಂದ ಮಾತನಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಯಶ್ ಮೊದಲಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ತುಂಬಾ ಖುಷಿಯಿದೆ, ದೇವರ ದಯೆ ಈಗ ಕಂಪ್ಲೀಟ್ ಫ್ಯಾಮಿಲಿ ಆಗಿದೆ. ಗಂಡು, ಹೆಣ್ಣು ಎರಡು ಖುಷಿಯನ್ನು ಅನುಭವಿಸುವ ಭಾಗ್ಯ ನನಗೆ ರಾಧಿಕಾಗೂ ಸಿಕ್ಕಿದೆ. ಹಿರಿಯರು ಹಾಗೂ  ಜನರ ಆಶೀರ್ವಾದ ನಮ್ಮ ಮನೆಯಲ್ಲಿ ಸಂತೋಷದ ಸುದ್ದಿಯೇ ಬರುತ್ತಿದೆ. ತುಂಬಾ ಖುಷಿಯಾಗುತ್ತಿದೆ ಎಂದು ಸಂತಸದಿಂದ ಹೇಳಿದರು.

ಇಬ್ಬರ ಆರೋಗ್ಯವೂ ಚೆನ್ನಾಗಿದೆ. ಈ ಸಲ ನಾನು ರಜೆ ತೆಗೆದುಕೊಂಡು ರಾಧಿಕಾ ಜೊತೆಯೇ ಕಾಲ ಕಳೆದಿದ್ದೇನೆ. ಇದುವರೆಗೂ ನಾನು ಶೂಟಿಂಗ್‌ಗೆ ಹೋಗಿಲ್ಲ. ನಾನು ಎರಡು ಮಕ್ಕಳು ಹುಟ್ಟಿದಾಗಲೂ ಆಸ್ಪತ್ರೆಯ ಥಿಯೇಟರ್‌ನಲ್ಲಿಯೇ ಇದ್ದೆ. ಜೀವನದಲ್ಲಿ ಮಕ್ಕಳು ಎಂದರೆ ಸಂತೋಷ. ನನಗೆ ಹೆಣ್ಣು ಮಗುವಾಗಬೇಕೆಂಬ ಆಸೆಯಿತ್ತು. ರಾಧಿಕಾಗೆ ಗಂಡು ಮಗುವಾಗಬೇಕೆಂಬ ಆಸೆಯಿತ್ತು. ಈಗ ಇಬ್ಬರ ಕನಸು ನನಸಾಗಿದೆ ಎಂದರು.

ರಾಧಿಕಾ ನಾನು ಜನ್ಮ ಕೊಟ್ಟಿದ್ದು, ಆದರೆ ಯಾರು ನನ್ನ ತರ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದರು. ಆದರೆ ಎರಡು ಮಕ್ಕಳು ನನ್ನ ಥರನೇ ಇದ್ದಾರೆ. ಮಕ್ಕಳಾಗುವುದೇ ಭಾಗ್ಯ, ಗಂಡಾಗಲಿ-ಹೆಣ್ಣಾಗಲಿ ಮಕ್ಕಳು ಎಂದರೆ ಸಂತಸ ಎಂದು ಯಶ್ ಖುಷಿಯನ್ನು ಹಂಚಿಕೊಂಡರು.

ಈ ವೇಳೆ ರಾಧಿಕಾ ಮಾತನಾಡಿ, ನನ್ನ ಜೀವನದಲ್ಲಿ ತಾಯಿ ಎನ್ನುವುದು ಮುಖ್ಯವಾದ ಪಾತ್ರವಾಗಿದೆ. ಅದರಲ್ಲೂ ನನಗೆ ಎರಡನೇ ಬಾರಿ ಅವಕಾಶ ಸಿಕ್ಕಿದೆ. ನಿಜಕ್ಕೂ ತುಂಬಾ ಖುಷಿಯಾಗಿದೆ ಎಂದರು ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು.

Comments

Leave a Reply

Your email address will not be published. Required fields are marked *