ಇಂಗ್ಲೆಂಡ್ ಟೆಸ್ಟ್: ಮೊದಲ ದಿನವೇ ಅಪರೂಪದ ದಾಖಲೆ ಬರೆದ ಆರ್ ಅಶ್ವಿನ್

ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಎದುರಾಳಿ ತಂಡದ 4 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅಪರೂಪದ ಸಾಧನೆ ಮಾಡಿದ್ದಾರೆ.

ಹೌದು, ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ವೇಳೆ ಅಶ್ವಿನ್ ಇಂಗ್ಲೆಂಡ್ ತಂಡದ ಕುಕ್, ಬೆನ್ ಸ್ಟೋಕ್ಸ್, ಜೊಸ್ ಬಟ್ಲರ್, ಸ್ಟುವರ್ಟ್ ಬ್ರಾಡ್ ರನ್ನು ಔಟ್ ಮಾಡುವ ಮೂಲಕ ನಾಲ್ಕು ವಿಕೆಟ್ ಪಡೆದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ದಿನವೇ 4 ವಿಕೆಟ್ ಪಡೆದ ಮೊದಲ ಟೀಂ ಇಂಡಿಯಾದ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ 4ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ಟೀಂ ಇಂಡಿಯಾ ಪರ ಸ್ಪಿನ್ನರ್ ಚಂದ್ರಶೇಖರ್ (6/94), ಬಿಷನ್ ಸಿಂಗ್ ಬೇಡಿ (5/55), ಅನಿಲ್ ಕುಂಬ್ಳೆ (5/84) ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ್ದರು.

ಕುಕ್‍ಗೆ ಮಾರಕವಾದ ಅಶ್ವಿನ್: ಪಂದ್ಯದ ವಿಶೇಷವಾಗಿ ಅಶ್ವಿನ್ ಇಂಗ್ಲೆಂಡ್ ತಂಡದ ಕುಕ್ ರನ್ನು ತಮ್ಮ ವೃತ್ತಿ ಜೀವನಲ್ಲಿ 8 ಬಾರಿಗೆ ಬಲಿ ಪಡೆದರು. ಇದರೊಂದಿಗೆ ಅಶ್ವಿನ್ ಬೌಲಿಂಗ್ ನಲ್ಲಿ ಹೆಚ್ಚು ಬಾರಿ ಔಟಾದ 2ನೇ ಆಟಗಾರ ಎನಿಸಿಕೊಂಡರು. ಅಸೀಸ್ ಆಟಗಾರ ಡೆವಿಡ್ ವಾರ್ನರ್ 9 ಬಾರಿ ಅಶ್ವಿನ್‍ಗೆ ಬಲಿಯಾಗಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಮೊದಲ ದಿನದಾಟದಲ್ಲಿ 25 ಓವರ್ ಬೌಲ್ ಮಾಡಿರುವ ಅಶ್ವಿನ್ 2.40 ಎಕಾನಮಿಯಲ್ಲಿ 60 ರನ್ ನೀಡಿ 4 ವಿಕೆಟ್ ಪಡೆದರು. ಇದರಲ್ಲಿ 7 ಓವರ್ ಮೆಡನ್ ಮಾಡಿ ಇಂಗ್ಲೆಂಡ್ ಬ್ಯಾಟ್ಸ್‍ಮನ್ ಗಳು ಪರದಾಡುವಂತೆ ಮಾಡಿದರು. ಉಳಿದಂತೆ ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 2, ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿದೆ.

Comments

Leave a Reply

Your email address will not be published. Required fields are marked *