ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದ ಆರ್‌ ಅಶ್ವಿನ್‌

ಬ್ರಿಸ್ಬೇನ್‌: ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ 38 ವರ್ಷದ ಹಿರಿಯ ಆಟಗಾರ,  ಸ್ಪಿನ್ನರ್‌ ಆರ್‌ ಅಶ್ವಿನ್‌ ನಿವೃತ್ತಿ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಬೆನ್ನಲ್ಲೇ ಅಶ್ವಿನ್‌ ನಿವೃತ್ತಿ ನಿರ್ಧಾರ ಪ್ರಕಟಿಸಿದರು.  5 ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದ ಅಶ್ವಿನ್‌ ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಡಿದ್ದರು. ಮೂರನೇ ಟೆಸ್ಟ್‌ ಪಂದ್ಯಕ್ಕೆ ಅಶ್ವಿನ್‌ ಬದಲು  ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಲಾಗಿತ್ತು.

 

2010 ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯವಾಡುವ ಮೂಲಕ ಅಶ್ವಿನ್‌ ಟೀಂ ಇಂಡಿಯಾ ಕ್ಯಾಪ್‌ ಧರಿಸಿದ್ದರು. 106 ಟೆಸ್ಟ್‌ ಕ್ರಿಕೆಟ್‌ ಆಡಿರುವ ಅಶ್ವಿನ್‌ 537 ವಿಕೆಟ್‌ ಪಡೆದಿದ್ದಾರೆ. 59 ರನ್‌ ನೀಡಿ 7 ವಿಕೆಟ್‌ ಪಡೆದಿದ್ದು ಇವರ ಅತ್ಯುತ್ತಮ ಸಾಧನೆ. 6 ಶತಕ ಮತ್ತು 14 ಬಾರಿ ಅರ್ಧಶತಕ ಹೊಡೆದಿದ್ದಾರೆ.

116 ಏಕದಿನ ಪಂದ್ಯವಾಡಿರುವ ಅಶ್ವಿನ್‌ 156 ವಿಕೆಟ್‌ ಪಡೆದರೆ 65 ಟಿ20 ಪಂದ್ಯಗಳಿಂದ 72 ವಿಕೆಟ್‌ ಪಡೆದಿದ್ದಾರೆ.

2022ರ ನವೆಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಕೊನೆಯ ಟಿ20 ಕ್ರಿಕೆಟ್‌ ಆಡಿದ್ದರೆ, 2023ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಅಶ್ವಿನ್‌ ಆಡಿದ್ದರು.

ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಅಶ್ವಿನ್‌ ಆಗಿದ್ದಾರೆ. ಅನಿಲ್‌ ಕುಂಬ್ಳೆ 619 ವಿಕೆಟ್‌ ಪಡೆದು ಮೊದಲ ಸ್ಥಾನದಲ್ಲಿದ್ದರೆ ಅಶ್ವಿನ್‌ 537 ವಿಕೆಟ್‌ ಪಡೆದಿದ್ದರು.