ಚುನಾವಣೆಗೂ ಮುನ್ನ ಸಾಯುತ್ತೇನೆ ಅಂದ್ರೆ ಓಕೆ, ಆದ್ರೆ ಈಗಲೂ ಏಕೆ: ಆರ್. ಅಶೋಕ್ ವ್ಯಂಗ್ಯ

ಮಂಡ್ಯ: ಸಿಎಂ ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಗೂ ಮುನ್ನ ನಾನು ಸಾಯುತ್ತೇನೆ ಎಂದು ಹೇಳಿ ಮತ ಪಡೆದರು. ಮಂಡ್ಯದಲ್ಲಿ 7 ಸ್ಥಾನಗಳು ಜೆಡಿಎಸ್ ಗೆದ್ದಿದೆ, ಆದ್ರೆ ಈಗ ಮತ್ತೆ ಸಾಯುತ್ತೇನೆ ಎಂದು ಹೇಳುತ್ತಿದ್ದಾರೆ. ಈಗ ಯಾರು ನಂಬುತ್ತಾರೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ಉಪಚುನಾವಣೆಯ ಹಿನ್ನೆಲೆಯಲ್ಲಿ ಮಂಡ್ಯದ ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ಪಕ್ಷದ ಅಭ್ಯರ್ಥಿ ಡಾಕ್ಟರ್ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ ಅಶೋಕ್ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ತಮ್ಮ ಆರೋಗ್ಯದ ಸಮಸ್ಯೆ ಹೇಳಿಕೊಂಡು ಸಾವಿನ ಬಗ್ಗೆ ಮಾತನಾಡಿದರು. ಚುನಾವಣೆಗೂ ಮುನ್ನವೂ ಕೂಡ ಬಂದು ನಾನು ಸತ್ತು ಹೋಗುತ್ತೇನೆ ಎಂದು ಹೇಳಿ ಮತ ಪಡೆದರು. ಆದರೆ ಗೆದ್ದು ಸಿಎಂ ಕುರ್ಚಿ ಪಡೆದ ಬಳಿಕವೂ ನಾನು ಇಸ್ರೇಲ್ ನಲ್ಲೇ ಸಾಯಬೇಕಿತ್ತು. ನಿಮ್ಮಗಾಗಿ ಬದುಕಿದ್ದೇನೆ ಎಂದು ಹೇಳುತ್ತಾರೆ. ಆದರೆ 7 ಸ್ಥಾನಗಳು ಗೆದ್ದ ಮಂಡ್ಯಕ್ಕೆ ಸಿಎಂ ಆಗಿ ಈಗ ಎಚ್‍ಡಿಕೆ ಏನು ಮಾಡಿದ್ದಾರೆ ಎಂದು ಹೇಳಿ ಪ್ರಶ್ನೆ ಮಾಡಿದರು.

ಇದೇ ವೇಳೆ ಕೊಟ್ಟ ಕುದುರೆ ಏರಲಾಗದವನು ವೀರನೂ ಅಲ್ಲ, ಧೀರನೂ ಅಲ್ಲ ಎಂದು ಗಾದೆ ಹೇಳಿ ವ್ಯಂಗ್ಯವಾಡಿದ ಅಶೋಕ್, ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮಂಡ್ಯದಲ್ಲಿ 25 ರೈತರು ಸತ್ತಿದ್ದಾರೆ. ನೀವು ಅಧಿಕಾರಕ್ಕೆ ಬಂದ ನಂತರ ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು ಕೊಟ್ಟಿದ್ದೀರಿ ತಿಳಿಸಿ. ಚುನಾವಣೆಯಲ್ಲಿ ಗೆಲುವು ಕೊಟ್ಟು, ಸಿಎಂ ಕುರ್ಚಿ ಕೊಟ್ಟು, ಹಣ, ಕಾರು, ಬಂಗಲೆ ಎಲ್ಲಾ ಕೊಟ್ಟ ಮೇಲೂ ಸಾಯುತ್ತೇನೆ ಅಂದರೆ ಯಾರು ನಂಬುತ್ತಾರೆ ಹೇಳಿ ಪ್ರಶ್ನೆ ಮಾಡಿದರು.

ಚುನಾವಣೆ ಬಳಿಕ ಮಂಡ್ಯಗೆ ಬಂದು ರೈತರಿಗೆ ನಾಟಿ ಮಾಡುವುದನ್ನು ಹೇಳಿ ಕೊಟ್ಟರು. ಒಂದೊಮ್ಮೆ ರೈತರ ಕಷ್ಟ ತಿಳಿಯಬೇಕಾದರೆ 1 ಎಕರೆ ಭೂಮಿ ಪಡೆದು ನಾಟಿ ಮಾಡಿದರೆ ಕಷ್ಟ ತಿಳಿಯುತ್ತದೆ ಎಂದರು. ಇದೇ ವೇಳೆ ದಿ. ಪುಟ್ಟಣಯ್ಯ ಅವರನ್ನು ನೆನೆದ ಆರ್ ಅಶೋಕ್ ಅವರು, ವಿಧಾನಸಭೆಯಲ್ಲಿ ನಾವು ಮಾತನಾಡುತ್ತೇವೆ, ಆದರೆ ಪುಟ್ಟಣಯ್ಯ ಅವರು ಮಾತನಾಡುವ ದಾಟಿ, ಜನರ ಬಗ್ಗೆ ಅವರಿಗಿರುವ ಕಾಳಜಿ ಎಲ್ಲರಿಗೂ ಸ್ಫೂರ್ತಿಯಾಗಿತ್ತು. ಅವರ ಭಾಷಣದ ಶೈಲಿಯೇ ಆಗಿರುತ್ತದೆ ಎಂದು ಮೆಚ್ಚುಗೆ ವ್ಯಕ್ತಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *