ನಂಗೆ ಹೋಳಿಗೆ ಊಟ ಬೇಡ – ನೆರೆ ಸಂತ್ರಸ್ತರೊಂದಿಗೆ ಊಟ ಮಾಡಿದ ಆರ್.ಅಶೋಕ್

ಚಿಕ್ಕಮಗಳೂರು: ತನಗಾಗಿ ಬೇರೆ ಊಟ ಮಾಡಿಸಿದ್ದರೂ ಸಹ ಕಂದಾಯ ಸಚಿವ ಆರ್.ಅಶೋಕ್ ಅವರು ನಿರಾಶ್ರಿತರ ಜೊತೆಗೆ ಕುಳಿತು ಊಟ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಮೂಡಿಗೆರೆಯ ಬಿದರಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಆರ್.ಅಶೋಕ್ ಭೇಟಿ ನೀಡಿದ್ದರು. ಈ ವೇಳೆ ಸಚಿವರಿಗೆ ಪ್ರತ್ಯೇಕವಾಗಿ ಹೋಳಿಗೆ ಊಟ ಮಾಡಿಸಿ, ಸಂತ್ರಸ್ತರಿಗೆ ಬೇರೆ ಊಟ ಮಾಡಿಸಿದ್ದರು. ಇದರಿಂದ ಕೋಪಿತರಾದ ಸಚಿವರು ನನಗೆ ಬೇರೆ ಊಟ ಬೇಡ, ನಾನೂ ಸಹ ಸಂತ್ರಸ್ತರ ಜೊತೆಯಲ್ಲೇ ಊಟ ಮಾಡುತ್ತೇನೆ. ಹಾಗೆಲ್ಲ ಬೇರೆ ಊಟ ಮಾಡಬಾರದು. ನನಗಾಗಿ ಯಾಕೆ ಬೇರೆ ಊಟ ಮಾಡಿಸಿದಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ನಾನು ನಿರಾಶ್ರಿತರ ಜೊತೆಯೇ ಊಟ ಮಾಡುತ್ತೇನೆ ಎಂದು”ಯಾರ್ಯಾರು ಊಟ ಮಾಡಿಲ್ಲ, ಬನ್ರಪ್ಪಾ ಊಟ ಮಾಡೋಣ” ಎಂದು ಆರ್.ಅಶೋಕ್ ಅವರು ನಿರಾಶ್ರಿತರನ್ನು ಊಟಕ್ಕೆ ಕರೆದಿದ್ದಾರೆ. ನಂತರ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಊಟದ ಬಳಿಕ ನಿತಾಶ್ರಿತರೊಂದಿಗೆ ಮಾತುಕತೆ ನಡೆಸಿದ್ದು, ಅವರ ಕಷ್ಟಗಳನ್ನು ಆಲಿಸಿದ್ದಾರೆ.

ಮಾತುಕತೆ ವೇಳೆ ಸಚಿವ ಅಶೋಕ್ ಎದುರು ನಿರಾಶ್ರಿತರು ಕಣ್ಣೀರು ಹಾಕಿದ್ದು, ನೆರೆಯಿಂದ ಬದುಕು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಿರಾಶ್ರಿತರಿಗೆ ಸಚಿವ ಅಶೋಕ್ ಭರವಸೆ ನೀಡಿದ್ದು, ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ, ಯಾರಿಗೂ ಸಹ ಚೆಕ್ ವಿತರಣೆ ಮಾಡಬೇಡಿ ಬ್ಯಾಂಕ್‍ನಲ್ಲಿ ಸಮಸ್ಯೆಯಾಗುತ್ತದೆ. ಎಲ್ಲ ಸಂತ್ರಸ್ತರಿಗೂ ಬ್ಯಾಂಕ್ ಖಾತೆ ಮೂಲಕವೇ ಆನ್‍ಲೈನ್‍ನಲ್ಲಿ ಪೇಮೆಂಟ್ ಮಾಡಿ ಎಂದು ಅಧಿಕಾರಿಗಳಿಗೆ ಇದೇ ವೇಳೆ ಆರ್ ಅಶೋಕ್ ಸೂಚಿಸಿದರು. ಬಿದ್ರಳ್ಳಿ ನಂತರ ಸಚಿವರು ಮಲೆಮನೆ, ಮಧುಗುಂಡಿ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

Comments

Leave a Reply

Your email address will not be published. Required fields are marked *