ವಿಧಾನಸಭೆಯಲ್ಲಿ ಕಾಗುಣಿತ ಹೇಳಿಬಿಟ್ಟರೆ ಮೇಷ್ಟ್ರಾಗಲ್ಲ- ಸಿದ್ದರಾಮಯ್ಯಗೆ ಆರ್.ಅಶೋಕ್ ಟಾಂಗ್

ಹಾವೇರಿ: ಸಿದ್ದರಾಮಯ್ಯನವರಿಗಿಂತ ನಮಗೆ ಕನ್ನಡಾಭಿಮಾನ ಜಾಸ್ತಿ ಇದೆ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಸಿಎಂ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಧ್ವಜ ವಿಚಾರದಲ್ಲಿ ಬಿಜೆಪಿಯವರು ಕನ್ನಡ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಆರೋಪದ ಕುರಿತು ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ಕಾಗುಣಿತ ಹೇಳಿಕೊಟ್ಟು ಬಿಟ್ಟರೆ ಸಿದ್ದರಾಮಯ್ಯನವರು ಮೇಷ್ಟ್ರು ಆಗೋಕೆ ಸಾಧ್ಯವಿಲ್ಲ. ಕನ್ನಡಾಭಿಮಾನ ಆರೂವರೆ ಕೋಟಿ ಜನಕ್ಕೂ ಇದೆ. ಸಿದ್ದರಾಮಯ್ಯ ಅವರಿಗೆ ಮಾತ್ರ ಇಲ್ಲ. ಕನ್ನಡ ನಾಡು, ನುಡಿ, ಜಲದ ಬಗ್ಗೆ ಬಿಜೆಪಿ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಕುಣಿಯಲು ಬಾರದ ವೇಶ್ಯೆ ನೆಲ ಡೊಂಕು ಎಂದಿದ್ದಳಂತೆ ಹಂಗೆ ಜೆಡಿಎಸ್ ಲೆಕ್ಕ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮಹಿಳೆಯರ ಕುರಿತು ಅಪಮಾನದ ಹೇಳಿಕೆ ನೀಡುವುದು ತಪ್ಪು. ಯಾವುದಕ್ಕೋ ಹೋಲಿಕೆ ಮಾಡುವುದು ಸರಿಯಲ್ಲ. ಅವರ ಹೇಳಿಕೆಯಿಂದ ಮಹಿಳಾ ಸಮಾಜಕ್ಕೂ ಅನ್ಯಾಯ ಮಾಡಿದಂತಿದೆ ಎಂದು ಸಿದ್ದರಾಮಯ್ಯನವರ ಹೇಳಿಕೆಯನ್ನು ಆರ್.ಅಶೋಕ್ ಖಂಡಿಸಿದರು.

ಅಧಿಕಾರದಲ್ಲಿದ್ದಾಗ ಕಾಂಗ್ರೆಸ್, ಜೆಡಿಎಸ್ ಜಗಳವಾಡಿದರು. ಇದೀಗ ಅಧಿಕಾರವಿಲ್ಲದೆ ಪರಿತಪಿಸುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅವರಿಗೆ ಭ್ರಮನಿರಸನವಾಗಿದೆ, ಹೀಗಾಗಿ ಮಧ್ಯಂತರ ಚುನಾವಣೆ ನಡೆಯುವ ಕುರಿತು ವ್ಯರ್ಥ ಪ್ರಲಾಪವನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ನಮಗೂ ಡಿಕೆಶಿ ಪ್ರಕರಣಕ್ಕೂ ಸಂಬಂಧವಿಲ್ಲ. ತಪ್ಪು ಮಾಡಿಲ್ಲ ಎಂದಾದರೆ, ವಿಚಾರಣೆ ಮಾಡಿ ಬಿಡುತ್ತಾರೆ. ಇಲ್ಲವಾದರೆ ಕ್ರಮ ಕೈಗೊಳ್ಳುತ್ತಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದರ ಕುರಿತು ಉತ್ತರಿಸಿದರು.

Comments

Leave a Reply

Your email address will not be published. Required fields are marked *