ಇವಿಎಂ ತಂದಿದ್ದೇ ಕಾಂಗ್ರೆಸ್‌; ಆಗ ಬೇಕಿತ್ತು ಈಗ ಬೇಡವಾ? ಚುನಾವಣಾ ಅಕ್ರಮ ಮಾಡಲೆಂದೇ ಬ್ಯಾಲೆಟ್ ಪೇಪರ್ ತರ್ತಿದ್ದಾರೆ: ಅಶೋಕ್

ಬೆಂಗಳೂರು: ಅಟಲ್‌ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗ ಬ್ಯಾಲೆಟ್‌ ಪೇಪರ್‌ ಇತ್ತು. ನಂತರ ಮನಮೋಹನ್‌ ಸಿಂಗ್‌ ಕಾಲದಲ್ಲಿ ಇವಿಎಂ ಬಂತು. ಆಗ ಇವರು ಅದನ್ನು ವಿರೋಧ ಮಾಡಲಿಲ್ಲ. ಈಗ ವಿರೋಧ ಏಕೆಂದು ಸರ್ಕಾರಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಆರ್.ಅಶೋಕ್, ಇವಿಎಂ ಬಂದ ನಂತರ ಎರಡು ಚುನಾವಣೆಗಳನ್ನು ಕಾಂಗ್ರೆಸ್‌ ಗೆದ್ದಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿ ಕೂಟದ 15 ಜನರು ವಿರುದ್ಧ ಮತ ಚಲಾಯಿಸಿದ್ದಾರೆ. ಹಾಗಾದರೆ ಮುಂದೆ ಹೆಬ್ಬೆಟ್ಟು ಚುನಾವಣೆ ತರುತ್ತಾರೆಯೇ ಎಂದು ಟೀಕಿಸಿದರು.

ಈ ಆಧುನಿಕ ಕಾಲದಲ್ಲಿ ಮೊಬೈಲ್‌ನಲ್ಲೇ ಎಲ್ಲ ಮಾಹಿತಿ ಪಡೆಯುತ್ತಾರೆ. ಆದಿಮಾನವ ಕಾಲಕ್ಕೆ ಹೋಗುವುದಾದರೆ ಬ್ಯಾಲೆಟ್‌ ಪೇಪರ್‌ ಬಳಸಬೇಕಾಗುತ್ತದೆ. ಬಿಹಾರದಲ್ಲಿ ಕಾಂಗ್ರೆಸ್‌ನ ಅಸ್ತಿತ್ವ ಇಲ್ಲ. ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡು ಜನರ ಮನಸ್ಸಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ಇವಿಎಂ ಕಾಂಗ್ರೆಸ್‌ನ ಪ್ರನಾಳ ಶಿಶು. ಈಗ ಅದೇ ಸರಿಯಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಇದನ್ನು ತಂದಿದ್ದು ಏಕೆಂದು ತಿಳಿಸಲಿ. ಇವಿಎಂ ಸುಪ್ರೀಂ ಕೋರ್ಟ್‌ನಲ್ಲೂ ಅನುಮೋದನೆಯಾಗಿದೆ. ಚುನಾವಣಾ ಆಯೋಗ ಹಾಕಿದ ಸವಾಲನ್ನು ಸ್ವೀಕರಿಸಿಲ್ಲ. ಅಫಿಡವಿಟ್‌ ಕೊಡದೆ ಓಡಿಹೋಗಿದ್ದಾರೆ. ಯಾವುದೋ ಸುಳ್ಳು ದಾಖಲೆಗಳನ್ನು ತೋರಿಸಿದ್ದಾರೆ. ಮಹದೇವಪುರ ಕ್ಷೇತ್ರದ ಬಗ್ಗೆ ಈಗ ಯಾರೂ ಮಾತಾಡುತ್ತಿಲ್ಲ. ಜನರಿಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್‌ನ ಎಂತಹ ಹೀನಾಯ ಸ್ಥಿತಿಗೆ ಹೋಗಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಶೋಕ್ ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಎಬಿವಿಪಿ ಆಯೋಜಿಸಿದ್ದ ಅಬ್ಬಕ್ಕರಾಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಏನೂ ತಪ್ಪಿಲ್ಲ. ಇದರಲ್ಲಿ ರಾಜಕಾರಣ ಮಾಡುವುದು ಬೇಡ ಎಂದರು.