ಕಾಂಗ್ರೆಸ್ ಗೆ ಕಗ್ಗಂಟಾದ ಅಂಬರೀಶ್ ಮೌನ- `ಕೈ’ ಬಿಡ್ತಾರಾ ಮಂಡ್ಯದ ಗಂಡು!

ಮಂಡ್ಯ: ರೆಬೆಲ್ ಸ್ಟಾರ್, ಶಾಸಕ ಅಂಬರೀಶ್ ಮೌನ ವಹಿಸಿರುವುದು ಇದೀಗ ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಎದ್ದಿದೆ.

ಚುನಾವಣಾ ದಿನಾಂಕ ಘೋಷಣೆಯಾದ್ರೂ ಮಾಜಿ ಸಚಿವ ಅಂಬರೀಶ್ ಮಾತ್ರ ಮಂಡ್ಯದ ಅಖಾಡಕ್ಕೆ ಇಳಿದಿಲ್ಲ. ಆದ್ರೆ ಇಂದಲ್ಲ ನಾಳೆ ಅಂಬಿ ಅಖಾಡಕ್ಕೆ ಇಳಿಯಬಹುದೆಂದು ಕಾಂಗ್ರೆಸ್ ನಾಯಕರು ನಿರೀಕ್ಷೆಯಲ್ಲಿದ್ದರೆ, ಇತ್ತ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮದೇ ಆದ ಲೆಕ್ಕಾಚಾರದಲ್ಲಿದ್ದಾರೆ ಎಂಬುದಾಗಿ ರಾಜಕೀಯ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದಿಂದ ದೂರ ಉಳಿದ ಮಂಡ್ಯದ ಗಂಡು-ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ ಅಂಬಿ ನಡೆ

ಎರಡು ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಅಂಬರೀಶ್‍ರನ್ನು ಪಕ್ಷದತ್ತ ಸೆಳೆಯಲು ಮುಂದಾಗಿವೆ. ಬಿಜೆಪಿ ಕೇಂದ್ರ ನಾಯಕರುಗಳೇ ಅಂಬರೀಶ್ ರನ್ನ ಸೆಳೆಯಲು ಮುಂದಾಗಿದ್ದು, ಕೇಂದ್ರದ ಮಾಜಿ ಸಚಿವ ಕೃಷ್ಣಂ ರಾಜು ಶುಕ್ರವಾರ ಬೆಂಗಳೂರಿಗೆ ಆಗಮಿಸಿ ಅಂಬರೀಶ್ ಜೊತೆ ಮಾತುಕತೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಅಂಬರೀಶ್‍ರನ್ನು ಬಿಜೆಪಿ ತೆಕ್ಕೆಗೆ ತರುವಂತೆ ಸ್ವತಃ ಬಿಜೆಪಿ ಹೈಕಮಾಂಡ್ ಕೃಷ್ಣಂ ರಾಜುರನ್ನು ಕಳುಹಿಸಿ ಕೊಡುತ್ತಿದೆ ಎಂಬುದಾಗಿ ಬಿಜೆಪಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

ಇನ್ನೊಂದೆಡೆ ಬಿಜೆಪಿ ವರಿಷ್ಠ ದೇವೇಗೌಡ ಅವರು ಅಂಬರೀಶ್‍ರೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಶುಕ್ರವಾರದವರೆಗೆ ಕಾದು ನೋಡುವ ತಂತ್ರಕ್ಕೆ ದೇವೇಗೌಡರು ಮೊರೆ ಹೋಗಿದ್ದಾರೆ. ಅಂಬರೀಶ್ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆದು ಎಲ್ಲವೂ ಸರಿಯಾದ್ರೆ ಸುಮ್ಮನಾಗುವುದು. ಇಲ್ಲಾ ಶುಕ್ರವಾರದ ನಂತರ ಅಂಬರೀಶ್‍ರನ್ನ ಭೇಟಿ ಮಾಡಿ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಆದರೆ ಇದೂವರೆಗೆ ಅಂಬರೀಶ್ ಎಲ್ಲೂ ಪಕ್ಷ ಬಿಡುವ ಮಾತನಾಡಿಲ್ಲ. ಚುನಾವಣೆಗೆ ಸ್ಪರ್ಧಿಸುವ ಇಲ್ಲವೆ ಸ್ಪರ್ಧಿಸದೇ ಇರುವ ಬಗ್ಗೆಯು ಹೇಳಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ವಿರುದ್ಧವೇ ಮುನಿಸಿಕೊಂಡ ರೆಬೆಲ್ ಸ್ಟಾರ್!

ಈ ನಡುವೆ ಅಂಬರೀಶ್ ಮತ್ತು ಸಿಎಂ ಭೇಟಿ ಮುಂದಕ್ಕೆ ಹೋಗಿದ್ದು, ಇಂದು ಅಂಬರೀಶ್ ಸಿಎಂ ಸಿದ್ದರಾಮಯ್ಯ ಭೇಟಿ ಆಗುವ ಸಾಧ್ಯತೆ ಇದೆ. ಇಂದೂ ಕೂಡ ಸಿಎಂ ಅಂಬರೀಶ್ ಭೇಟಿ ಸಾಧ್ಯವಾಗದಿದ್ದರೆ ಅಂಬರೀಶ್ ಬೇರೆ ನಿರ್ಧಾರ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಅಂಬರೀಶ್ ಅವರ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Comments

Leave a Reply

Your email address will not be published. Required fields are marked *