ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧುಗೆ ಕಿರುಕುಳ-ಇಂಡಿಗೋ ವಿಮಾನದಲ್ಲಾದ ಕಹಿ ಅನುಭವ ಬಿಚ್ಚಿಟ್ಟ ಖ್ಯಾತ ಕ್ರೀಡಾಪಟು..!

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ವಿಮಾನ ಪ್ರಯಾಣದ ವೇಳೆ ತಮಗಾದ ಕೆಟ್ಟ ಅನುಭವದ ಕುರಿತು ಟ್ವೀಟ್ ಮಾಡುವ ಮೂಲಕ ಇಂಡಿಗೊ ವಿಮಾನ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಶನಿವಾರ ಹೈದರಾಬಾದ್‍ನಿಂದ ಮುಂಬೈಗೆ ಹೊರಟಿದ್ದ ಇಂಡಿಗೊ ಸಂಸ್ಥೆಯ 6ಇ 608 ಹೆಸರಿನ ವಿಮಾನದ ಪ್ರಯಾಣದ ವೇಳೆ ಅಜಿತೇಶ್ ಎಂಬ ಸಿಬ್ಬಂದಿ ಅಸಭ್ಯವಾಗಿ ವರ್ತನೆ ಮಾಡಿದ್ದು, ಈ ವೇಳೆ ಗಗನಸಖಿ ಎಂ.ಎಸ್ ಆಷಿಮಾ ಎಂಬವರು ಮಧ್ಯ ಪ್ರವೇಶಿಸಿ ಅಜಿತೇಶ್ ಅವರಿಗೆ ಗ್ರಾಹಕರೊಂದಿಗೆ ಸರಿಯಾಗಿ ನಡೆದುಕೊಳ್ಳುವಂತೆ ಸಲಹೆ ನೀಡಿದ್ದರು. ಇಂತಹ ಸಿಬ್ಬಂದಿ ಕಾರ್ಯನಿರ್ವಹಿಸುವುದರಿಂದ ವಿಮಾನಯಾನ ಸಂಸ್ಥೆಯ ಹೆಸರಿಗೆ ಧಕ್ಕೆಯಾಗುತ್ತದೆ ಎಂಬ ಸಲಹೆಯನ್ನು ಸಿಂಧು ಅವರು ತಮ್ಮ ಸರಣಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಪಿ.ವಿ. ಸಿಂಧು ಅವರ ಆರೋಪಕ್ಕೆ ಇಂಡಿಗೊ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ತಮ್ಮ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದ್ದಾರೆ. ಪಿ.ವಿ ಸಿಂಧು ಅವರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ತೂಕದ ಹ್ಯಾಂಡ್ ಬ್ಯಾಗನ್ನು ತಂದಿದ್ದರು. ಅದನ್ನು ವಿಮಾನದ ಓವರ್ ಹೆಡ್ ಬಿನ್ ನಲ್ಲಿ ಇಡಲು ಆಗುತ್ತಿರಲಿಲ್ಲ. ಈ ಕುರಿತು ತಮ್ಮ ಸಿಬ್ಬಂದಿ ಮಾಹಿತಿ ನೀಡಿ ವಿಮಾನದ ಕಾರ್ಗೊ ಸ್ಥಳಕ್ಕೆ ಬ್ಯಾಗ್‍ನ್ನು ಸ್ಥಳಾಂತರಿಸುವ ಬಗ್ಗೆ ತಿಳಿಸಿದ್ದರು. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ಪಾಲಿಸಲಾಗುತ್ತಿದೆ ಎಂದು ಇಂಡಿಗೊ ವಿಮಾನದ ಅಧಿಕಾರಿ ಅಜಯ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರ ಸಾಧನೆ ಬಗ್ಗೆ ನಮಗೇ ಹೆಮ್ಮೆ ಇದ್ದು, ದೇಶದ ಕೀರ್ತಿಯನ್ನು ಎಲ್ಲೆಡೆ ಸಾರಿದ್ದಾರೆ. ಆದರೆ ನಮ್ಮ ಸಿಬ್ಬಂದಿ ಆತನ ಕರ್ತವ್ಯವನ್ನು ಅಷ್ಟೇ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸಿಂಧು ಪ್ರಯಾಣದ ವೇಳೆ ವಿಮಾನ ಸಿಬ್ಬಂದಿಗೆ ತನ್ನ ಬ್ಯಾಗ್ ಅನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಸಮಯದಲ್ಲಿ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಿಂಧು ತಂದೆ ರಾಮಣ್ಣ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *