ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

ಮನಿಲಾ: ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿವಿ ಸಿಂಧು ಅಂಪೈರ್‌ ವಿರುದ್ಧ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಿಲಿಪ್ಪೀನ್ಸ್‌ನಲ್ಲಿ ನಡೆದ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು ಜಪಾನಿನ ಯಮಗುಚಿ ವಿರುದ್ಧ 21-13, 19-21, 16-21 ಸೆಟ್‌ನಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಡೆದಿದ್ದಾರೆ.

ಎರಡನೇ ಗೇಮ್‌ ವೇಳೆ ಸಿಂಧು 14-12 ರಲ್ಲಿ ಮುಂದಿದ್ದಾಗ ಸರ್ವ್‌ ಮಾಡಲು ಬಹಳ ಸಮಯ ತೆಗೆಯುತ್ತಿದ್ದಾರೆಂದು ಎದುರಾಳಿ ಆಟಗಾರ್ತಿಗೆ ಅಂಪೈರ್‌ 1 ಪೆನಾಲ್ಟಿ ಅಂಕವನ್ನು ನೀಡಿದ್ದರು. ಈ ವೇಳೆ ಸಿಂಧು ಈ ರೀತಿ ಅಂಕ ನೀಡುವುದು ಎಷ್ಟು ಸರಿ ಎಂದು ಮೈದಾನದಲ್ಲೇ ಪ್ರಶ್ನೆ ಮಾಡಿ ಸಿಟ್ಟು ಹೊರ ಹಾಕಿದ್ದರು.

ಪಂದ್ಯದ ಬಳಿಕ ಮಾತನಾಡಿದ ಸಿಂಧು, ಸರ್ವ್‌ ಮಾಡಲು ತಡ ಮಾಡುತ್ತಿದ್ದೇನೆ ಎಂದು ಹೇಳಿ ಅಂಪೈರ್‌ ಎದುರಾಳಿ ಆಟಗಾರ್ತಿಗೆ ಪೆನಾಲ್ಟಿ ಅಂಕ ನೀಡಿದರು. ಆದರೆ ನಾನು ಸರ್ವ್‌ ಮಾಡುವ ಸಮಯದಲ್ಲಿ ಆಟಗಾರ್ತಿ ಸಿದ್ಧವಾಗಿರಲಿಲ್ಲ. ಆದರೆ ಅಂಪೈರ್‌ ದಿಢೀರ್‌ ಅಂಕವನ್ನು ನೀಡಿದ್ದು ಸರಿಯಲ್ಲ. ಇದರಿಂದಾಗಿ ನನ್ನ ಆತ್ಮವಿಶ್ವಾಸ ಕುಗ್ಗಿತು. ಅಂಪೈರ್‌ ನಿರ್ಧಾರದಿಂದ ನಾನು ಸೋತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!

ಅಂಪೈರ್‌ ಪನಾಲ್ಟಿ ನೀಡುವ ಸಮಯದಲ್ಲಿ ನಾನು ಮುಂದಿದ್ದೆ. ಈ ರೀತಿ ಅಂಕ ನೀಡಿದ್ದು ಅನ್ಯಾಯ. ಪಂದ್ಯದ ರೆಫ್ರಿ ಜೊತೆ ನಾನು ಮಾತನಾಡಿದೆ. ಆದರೆ ರೆಫ್ರಿ ಈಗಾಗಲೇ ಅಂಕ ನೀಡಲಾಗಿದೆ ಏನು ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ರಿಪ್ಲೈ ನೋಡುವಾಗ ಅವರಿಗೆ ಈ ತಪ್ಪು ಅರ್ಥವಾಗಬಹುದು. ಅಂಪೈರ್‌ ಈ ರೀತಿ ಅಂಕ ನೀಡದೇ ಇದ್ದಲ್ಲಿ ನಾನು ಪಂದ್ಯವನ್ನು ಗೆದ್ದು ಫೈನಲ್‌ ತಲುಪುತ್ತಿದ್ದೆ ಎಂದು ತಿಳಿಸಿದರು.

ಸಿಂಧು ತಂದೆ ರಮಣ ಮಾತನಾಡಿ, ಈ ಟೂರ್ನಿಯಲ್ಲಿ ಸಿಂಧು ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಳು. ಆಂಪೈರ್‌ ಯಾವುದೇ ಎಚ್ಚರಿಕೆ ನೀಡದೇ ಪೆನಾಲ್ಟಿ ನೀಡಿದ್ದು ತಪ್ಪು. ಮಗಳ ಜೊತೆ ಮಾತನಾಡುವಾಗ ಆಕೆ ಕಣ್ಣೀರಿಟ್ಟಳು ಎಂದು ಹೇಳಿದರು.

ಅಂಪೈರ್‌ ವಿರುದ್ಧ ಸಿಟ್ಟು ಹೊರ ಹಾಕಿದ್ದ ಸಿಂಧು ಪಂದ್ಯದ ಬಳಿಕ ನಡೆದ ಪದಕ ವಿತರಣೆ ಕಾರ್ಯಕ್ರಮಕ್ಕೂ ಗೈರಾಗಿದ್ದರು.

Comments

Leave a Reply

Your email address will not be published. Required fields are marked *