ಕೊರಿಯಾ ಓಪನ್ ಸೂಪರ್ ಸಿರೀಸ್: ಚೀನಾದ ಬಿಂಗ್ ಜಿವೊ ರನ್ನು ಸೋಲಿಸಿ ಫೈನಲ್‍ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು

ಸಿಯೋಲ್: ಕೊರಿಯಾ ಓಪನ್ ಸೂಪರ್ ಸಿರೀಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಚೀನಾದ ಬಿಂಗ್ ಜಿವೊ ಅವರನ್ನು ಪಿ.ವಿ.ಸಿಂಧು 21-10, 17-21, 21-16 ಅಂತರದಿಂದ ಸೋಲಿಸಿ ಪಂದ್ಯದ ಅಂತಿಮ ಹಂತವನ್ನು ತಲುಪಿದ್ದಾರೆ. ಪಂದ್ಯದ ಆರಂಭದಲ್ಲಿ ತಮ್ಮ ಬಿರುಸಿನ ಹೊಡೆತಗಳ ಮೂಲಕ 4-1ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಈ ವೇಳೆ ಬಿಂಗ್ ಜಿವೊ ಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಪಂದ್ಯದ ಮೊದಲ ಸೆಟ್ ಕೇವಲ 16 ನಿಮಿಷಗಳಲ್ಲಿ ಮುಕ್ತಾಯವಾಯಿತು.

ಮುಂದೆ ಎರಡು ಮತ್ತು ಮೂರನೇ ಸೆಟ್‍ನಲ್ಲಿಯೂ ಸಿಂಧು ಎದುರಾಳಿಯನ್ನು ತಮ್ಮ ಬಿರುಸಿನ ಹೊಡೆತಗಳ ಮೂಲಕ ಮಣಿಸಿ ಗೆಲುವನ್ನು ತಮ್ಮದಾಗಿಸಿಕೊಂಡರು. 2014ರ ವಿಶ್ವ ಚ್ಯಾಂಪಿಯನ್ ಕಂಚಿನ ಪದಕ ವಿಜೇತೆ ಜಪಾನ್ ನ ಮಿನಟ್ಸು ಮಿಟಾನಿ ಅವರನ್ನು ಸಿಂಧು 21-19, 16-21, 21-10 ಸೆಟ್ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.

ಪೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಜಪಾನಿನ ನೋಜುಮಿ ಓಕುರಹಾ ಅವರ ವಿರುದ್ಧ ಸಿಂಧು ಸೆಣಸಲಿದ್ದಾರೆ.

Comments

Leave a Reply

Your email address will not be published. Required fields are marked *