ಇಳಿವಯಸ್ಸಲ್ಲೂ ಕುಂದದ ಶಿಕ್ಷಣ ಪ್ರೇಮ- 90ರ ಹರೆಯದಲ್ಲೂ ಮಕ್ಕಳಿಗೆ ಪಾಠ

– ಹಾವೇರಿಯ ಪುಟ್ಟಮ್ಮಜ್ಜಿ ಪಬ್ಲಿಕ್ ಹೀರೋ

ಹಾವೇರಿ: ಸಾಮಾನ್ಯವಾಗಿ ನಿವೃತ್ತಿಯಾದ ನಂತರ ಜಮೀನು, ಗದ್ದೆ, ಮನೆ, ಮಕ್ಕಳು, ಮೊಮ್ಮಕ್ಕಳಿಗೆ ಸೀಮಿತ ಆಗುತ್ತಾರೆ. ಆದರೆ ಹಾವೇರಿಯ ಪುಟ್ಟಮ್ಮಜ್ಜಿ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ನಂತರ ಅಲ್ಪ ಹಣ ಹಾಗೂ ಸಾಲ ಮಾಡಿಕೊಂಡು ಪ್ರಾಥಮಿಕ ಸ್ಥಾಪನೆ ಮಾಡಿದ್ದಾರೆ. ಸಾವಿರಾರು ಬಡಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಈಗ ವಯಸ್ಸು 90 ವರ್ಷ ಆದರೂ 2 ಮತ್ತು 3ನೇ ತರಗತಿಗಳಿಗೆ ಪಾಠ ಮಾಡುತ್ತಾರೆ.

ಹೌದು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆಯ ನಿವಾಸಿಯಾಗಿರುವ ಪುಟ್ಟಮ್ಮಜ್ಜಿಗೆ ವಯಸ್ಸು 90. 30 ವರ್ಷಗಳಲ್ಲಿ ವಿವಿಧೆಡೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪುಟ್ಟಮ್ಮಜ್ಜಿ, ನಂತರ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡೋ ಸಲುವಾಗಿಯೇ 1990ರಲ್ಲಿ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪಿಸಿದ್ರು. ಅದೀಗ ಹೆಮ್ಮರವಾಗಿ ಬೆಳೆದಿದೆ. ಪುಟ್ಟಮ್ಮಜ್ಜಿ ವಯಸ್ಸಿನ ಹಂಗಿಲ್ಲದೇ ನಿತ್ಯ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಾರೆ.

ಕೊಡಿಯಾಲ ಹೊಸಪೇಟೆಯಲ್ಲಿರೋ ಕೂಲಿ ಕಾರ್ಮಿಕರು, ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ರು. ಇದನ್ನು ಗಮನಿಸಿದ ಪುಟ್ಟಮ್ಮಜ್ಜಿ, ತಮಗೆ ಬರ್ತಿದ್ದ 2000ರೂ. ಪಿಂಚಣಿ ಹಣದಿಂದ ಶಾಲೆ ಶುರು ಮಾಡಿದ್ರು. ಸದ್ಯ 1-7ನೇ ತರಗತಿಗಳು ನಡೆಯುತ್ತಿದ್ದು 150ಕ್ಕೂ ಹೆಚ್ಚು ಮಕ್ಕಳು ಓದುತ್ತಿವೆ. ನಿತ್ಯ ಶಾಲೆಗೆ ಬರೋ ಪುಟ್ಟಮ್ಮಜ್ಜಿ, 2 ಮತ್ತು 3ನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಹಾಡು, ನೃತ್ಯ ಹೇಳಿ ಕೊಡುತ್ತಾರೆ. ಪುಟ್ಟಮ್ಮಜ್ಜಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು ಎಂದು ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಭಾವಿಕಟ್ಟಿ ಹೇಳುತ್ತಾರೆ.

ಪುಟ್ಟಮ್ಮಜ್ಜಿ ಮೊದಲ 10 ವರ್ಷ ತಮಗೆ ಬರೋ ಪಿಂಚಣಿ ಹಣದಲ್ಲಿ ಸಿಬ್ಬಂದಿಗೆ ವೇತನ ನೀಡುತ್ತಿದ್ದರು. ನಂತರ ಈ ಶಾಲೆಗೆ ಸರ್ಕಾರದ ಅನುದಾನ ಸಿಕ್ಕಿತು. ಒಟ್ಟಿನಲ್ಲಿ ಪುಟ್ಟಮ್ಮಜ್ಜಿಯ ಶಿಕ್ಷಣ ಪ್ರೇಮ ಆದರ್ಶಪ್ರಾಯವಾಗಿದೆ.

Comments

Leave a Reply

Your email address will not be published. Required fields are marked *