10 ದಿನಗಳ ಹಿಂದೆ ಹುಟ್ಟೂರಿಗೆ ಬಂದು ಪ್ರವಚನ – ರಾಮಕುಂಜದಲ್ಲಿ ನೀರವ ಮೌನ

ಪುತ್ತೂರು: ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ವಿಶ್ವಮಾನ್ಯರಾಗುವ ಮುನ್ನ ಪುಟ್ಟ ಬಾಲಕನಾಗಿ ಓಡಾಡಿದ, ಹಳ್ಳಕ್ಕೆ ಬಿದ್ದ, ಪೂಜೆ ಮಾಡುತ್ತಾ ಖುಷಿಪಟ್ಟ ಊರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ.

ಶ್ರೀಗಳ ಹುಟ್ಟೂರಾಗಿ, ಮಧ್ವಾಚಾರ್ಯರ ಪಾದಸ್ಪರ್ಶ ಅನುಭವಿಸಿದ ಈ ಊರು ಈಗ ಶಿಕ್ಷಣ ಕಾಶಿಯಾಗಿಯೂ ಜನಪ್ರಿಯವಾಗಿದೆ. ಏಳನೇ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ಪಡೆದರೂ ರಾಮಕುಂಜದೊಂದಿಗಿನ ಪ್ರೀತಿಯ ಸಂಬಂಧ ಈ 88ರ ಹರೆಯದಲ್ಲೂ ಮುಂದುವರಿದಿತ್ತು. ಅಲ್ಲಿನ ದೈವಿಕ ವಾತಾವರಣ, ಜನರ ಪ್ರೀತಿ ಮತ್ತು ಹುಟ್ಟೂರಿನ ಅಭಿಮಾನ ಶ್ರೀಗಳ ಹೃದಯದಲ್ಲಿ ನಿರಂತರವಾಗಿ ಇತ್ತು. ಅನಾರೋಗ್ಯ ಇದ್ದರೂ ಕಳೆದ 10 ದಿನಗಳ ಹಿಂದೆ ಶ್ರೀಗಳು ತಾವು ಹುಟ್ಟಿದ ಊರಿಗೆ ಬಂದು ಗ್ರಾಮದ ಜನರಿಗೆ ಪ್ರವಚನ ನೀಡಿದ್ದರು. ಇದನ್ನೂ ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು

ಶಿವಳ್ಳಿ ಬ್ರಾಹ್ಮಣ ಪಡ್ಡಿಲ್ಲಾಯ ಕುಲದಲ್ಲಿ 1931ರ ನವೆಂಬರ್ 27 ರಂದು ಮೀಯಾಳ ನಾರಾಯಣ ಆಚಾರ್ಯ ಹಾಗೂ ಕಮಲಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ ಹಳೆ ನೇರಂಕಿ ಗ್ರಾಮದ ಎರೆಟಾಡಿ ಮನೆ ಈಗಲೂ ಗಟ್ಟಿಯಾಗಿದೆ. ಮಣ್ಣಿನ ಗೋಡೆ ನವೀಕರಣಗೊಂಡಿದೆ. ಪ್ರಸಕ್ತ ಈ ಮನೆಯಲ್ಲಿ ಶ್ರೀಗಳ ತಮ್ಮನ ಮಗ ರಾಮಕುಂಜೇಶ್ವರ ಪಿಯು ಕಾಲೇಜಿನ ಉಪನ್ಯಾಸಕ ಹರಿ ನಾರಾಯಣ ಆಚಾರ್ಯರ ಕುಟುಂಬ ವಾಸವಾಗಿದೆ.  ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ

ಮನೆ ದೇವರು ವಿಷ್ಣುಮೂರ್ತಿಗೆ ಇಂದಿಗೂ ಇಲ್ಲಿ ಹರಿ ನಾರಾಯಣ ಆಚಾರ್ಯ ಅವರು ನಿತ್ಯ ಪೂಜೆ ನಡೆಸುತ್ತಿದ್ದಾರೆ. ಮನೆಯ ಪೂರ್ವಕ್ಕೆ 100 ಮೀ. ಅಂತರದಲ್ಲಿರುವ ಪುರಾತನ ವಿಷ್ಣುಮೂರ್ತಿ ದೇವಸ್ಥಾನ ಈಗ ಮುಳಿಹುಲ್ಲಿನಿಂದ ಮೇಲೆದ್ದಿದೆ. ಇಲ್ಲಿ ಶ್ರೀಗಳ ಅಜ್ಜ ಹಾಗೂ ತಂದೆ ಪೂಜೆ ಮಾಡುತ್ತಿದ್ದರು. ಇಲ್ಲೇ ಗರ್ಭಗುಡಿಯ ಇಡೆನಾಳ್ಯದಲ್ಲಿ ಕುಳಿತು ಪೇಜಾವರರು ದೇವರ ನೈವೇದ್ಯ ಸೇವಿಸಿ ಧಾರ್ಮಿಕತೆಯನ್ನು ಆವಾಹಿಸಿಕೊಂಡವರು ಎಂದು ಹರಿ ನಾರಾಯಣ ಆಚಾರ್ಯರು ಹೇಳುತ್ತಾರೆ. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

ಇಂದು ಶ್ರೀಗಳು ಇಲ್ಲದೇ ಇರುವುದರಿಂದ ರಾಮಕುಂಜ ಗ್ರಾಮದಲ್ಲಿ ಒಬ್ಬ ತಪಸ್ವಿಯನ್ನು ಕಳೆದುಕೊಂಡು ಊರೇ ಅನಾಥವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣದ ಕ್ರಾಂತಿಯನ್ನು ರಾಮಕುಂಜ ಗ್ರಾಮದಲ್ಲಿ ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ಮಾಡಿದ ಶ್ರೀಗಳು ಇಂದು ನಮ್ಮೊಂದಿಗೆ ಇಲ್ಲ ಎಂಬ ನೋವು ಗ್ರಾಮಸ್ಥರಲ್ಲಿದೆ.

Comments

Leave a Reply

Your email address will not be published. Required fields are marked *