ಸಿಎಂ ಕುಮಾರಸ್ವಾಮಿ ಈಗ ಪಿಹೆಚ್‍ಡಿ ಮಾಡಿದ್ದಾರೆ: ಪುಟ್ಟರಾಜು

ಮಂಡ್ಯ: ಸರ್ಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಿಹೆಚ್‍ಡಿ ಮಾಡಿದ್ದಾರೆ ಎಂದು ಹೇಳುವ ವೇಳೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಸಚಿವ ಸಿಎಸ್ ಪುಟ್ಟರಾಜು ಅಧಿಕೃತವಾಗಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 10- 12 ವರ್ಷಗಳಲ್ಲಿನ 20 ತಿಂಗಳು ಅಧಿಕಾರದ ಅನುಭವದಿಂದಾಗಿ ಸಮ್ಮಿಶ್ರ ಸರ್ಕಾರ ನಡೆಸಿಕೊಂಡು ಜನರಿಗೆ ಒಳ್ಳೆಯದು ಮಾಡುವ ವಿಚಾರ ಅವರಿಗೆ ಕರಗತವಾಗಿದೆ. ಸರ್ಕಾರ ಉರುಳಿ ಬಿಳುತ್ತೆ ಎಂದು ಮನಸ್ಸಿಗೆ ಬೇಜಾರು ಮಾಡಿಕೊಳ್ಳೋದು ಬೇಡ. ನಮ್ಮ ಸರ್ಕಾರ 5 ವರ್ಷ ಪೂರೈಸಲಿದೆ. ಇದಕ್ಕೆ ಮಾಧ್ಯಮದವರ ಸಹಕಾರ ಇರಲಿ ಎಂದು ಹೇಳಿದರು.

ಈ ವೇಳೆ ಮಾತನಾಡುತ್ತಾ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಖಚಿತವಾಗುವ ಸಾಧ್ಯತೆ ಇದೆ ಎಂದು ಇದರ ಬಗ್ಗೆ ಅಧಿಕೃತವಾಗಿ ಹೇಳಿದರು. ಮುಂದಿನ ಲೋಕಸಭೆಗೂ ಮೈತ್ರಿಯಾಗಿ ಹೆಚ್ಚಿನ ಸ್ಥಾನಗಳನ್ನ ಗೆಲ್ಲುವುದಕ್ಕಾಗಿಯೇ ಮೈತ್ರಿ ಸರ್ಕಾರ ರಚಿಸಲಾಗಿದೆ. ಈ ವಿಚಾರ ಕುರಿತು ಪಕ್ಷದ ವರಿಷ್ಠರು ಅಂತಿಮವಾಗಿ ನಿರ್ಧರಿಸುತ್ತಾರೆ ಎಂದರು.

ರಮ್ಯಾ ವೋಟ್ ಮಾಡಲು ಮಂಡ್ಯಕ್ಕೆ ಬಾರದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಬಂದಾಗ ರಮ್ಯಾ ಹೀರೊಯಿನ್ ಎಂದು ತೋರಿಸಿ, ನಮ್ಮನ್ನ ಝೀರೋ ಮಾಡುತ್ತೀರಿ. ಅವರು ಆಟೋದಲ್ಲಿ ಹೋದರೂ ದೊಡ್ಡದಾಗಿ ತೋರಿಸುವವರು ನೀವೇ. ನಮ್ಮನ್ನ ಮೂರುಕಾಸಿಗೂ ಲೆಕ್ಕ ಇಟ್ಟುಕೊಳ್ಳುವುದಿಲ್ಲ. ಈಗ ಅವರನ್ನ ದೊಡ್ಡ ಹೀರೋಯಿನ್ ಮಾಡಿ ಅವರ ಬಗ್ಗೆ ನಮ್ಮನ್ನ ಕೇಳಿದರೆ ಹೇಗೆ ಎಂದು ಪ್ರಶ್ನಿಸಿ ಮಾಧ್ಯಮದ ವಿರುದ್ಧ ಸಚಿವ ಪುಟ್ಟರಾಜು ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *